ವರಂಗ ಗ್ರಾ. ಪಂ. ವ್ಯಾಪ್ತಿಯ ಅಂಡಾರು ಗ್ರಾಮದ ಆಯರಬೆಟ್ಟು ಪರಿಸರದ ಸೇತುವೆ ಭಾರೀ ಮಳೆಗೆ ಕುಸಿತಗೊಂಡಿದ್ದು ಸ್ಥಳೀಯರಿಗೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ.
ಕೆಲವು ವರ್ಷಗಳ ಹಿಂದೆ ನಿರ್ಮಾಣ ವಾದ ಈ ಸೇತುವೆಯು ಸ್ಥಳೀಯರಿಗೆ ಮಳೆಗಾಲದಲ್ಲಿ ಸಂಚರಿಸಲು ಏಕೈಕ ರಸ್ತೆಯಾಗಿತ್ತು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ಬಂದು ಸೇತುವೆ ಕುಸಿತಗೊಂಡಿದೆ. ಈ ಭಾಗದಲ್ಲಿ ಇನ್ನೂ ಒಂದೆರಡು ತಿಂಗಳು ಭಾರೀ ಮಳೆಯಾಗುವುದರಿಂದ ಈ ಸೇತುವೆ ಸಂಪೂರ್ಣ ಕೊಚ್ಚಿ ಹೋಗುವ ಆತಂಕ ಸ್ಥಳಿಯರದ್ದು.
ಆಯರಬೆಟ್ಟು, ಪೈತಾಳ ದರ್ಖಾಸು, ಪರಿಶಿಷ್ಟ ಪಂಗಡ ಕಾಲನಿ, ಪಕ್ಕಿಬೈಲು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಈ ಸೇತುವೆ ಕುಸಿತದಿಂದ ಸಮಸ್ಯೆ ಎದುರಾಗಿದೆ.ಸುಮಾರು 80 ಮನೆಗಳು ಈ ಪರಿಸರದಲ್ಲಿದ್ದು ಮಲೆಕುಡಿಯ ಸಮುದಾಯದ ಜನತೆಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಅಂಡಾರು ಪೇಟೆಯಿಂದ ಪೈತಾಳ ಭಾಗವನ್ನು ಸಂಪರ್ಕಿಸುವ ಏಕೈಕ ರಸ್ತೆ ಇದಾಗಿದ್ದು ಸಂಪೂರ್ಣ ಕುಸಿತಗೊಂಡಲ್ಲಿ ಈ ಭಾಗದ ಜನತೆ ಸಂಪರ್ಕ ಕಳೆದು ಕೊಳ್ಳಲಿದ್ದಾರೆ.ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಬೇಕಿದೆ.
Kshetra Samachara
02/07/2022 07:38 pm