ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಶನಿವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಅತಿಕಾರಿಬೆಟ್ಟು ಗ್ರಾಮದ ಮಟ್ಟು ಪರಿಸರದಲ್ಲಿ ಭಾನುವಾರ ಬೆಳಗ್ಗೆ ಸುಮಾರು 20 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.
ಮುಲ್ಕಿ ವಿಶೇಷ ತಹಸೀಲ್ದಾರ್ ಮಾಣಿಕ್ಯ ಎನ್., ಮುಲ್ಕಿ ನ. ಪಂ. ಮುಖ್ಯಾಧಿಕಾರಿ ಚಂದ್ರಪೂಜಾರಿ ನೇತೃತ್ವದಲ್ಲಿ ಅತಿಕಾರಿಬೆಟ್ಟು ಗ್ರಾಪಂ ಪಿಡಿಒ ರವಿ, ಮಾಜಿ ಪಂ. ಸದಸ್ಯ ದಯಾನಂದ ಮಟ್ಟು, ಮನೋಹರ ಕೋಟ್ಯಾನ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಸ್ಥಳೀಯ ಯುವಕರಾದ ಸಚಿನ್ ಅಂಚನ್, ಗಣೇಶ್ ಪಂಡಿತ್, ಅವಿನಾಶ್ ಅಂಚನ್, ಸಂತೋಷ ಅಂಚನ್, ಅವಿನಾಶ್ ಮಟ್ಟು, ವಿನೋದ್, ಸಂತೋಷ ಸುವರ್ಣ, ಹಿಮಕರ, ಪಂ. ಪಂಪ್ ಆಪರೇಟರ್ ಅಶ್ವಥ್, ಸುರೇಂದ್ರ, ಉದಯ ಅಮೀನ್, ಮನೋಜ್ ಅವರು ಮೆಲ್ವಿನ್ ಮತ್ತು ಲ್ಯಾನ್ಸಿ ಎಂಬವರ ಎರಡು ದೋಣಿಯಲ್ಲಿ ನೆರೆ ಹಾವಳಿ ಗೆ ತುತ್ತಾದವರನ್ನು ಬಿರುಮಳೆ ನಡುವೆಯೂ ರಕ್ಷಿಸಿದ್ದಾರೆ.
ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬೋಟ್ ಜೊತೆ ಬಂದಿದ್ದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಮುಲ್ಕಿ ನಗರ ಪಂ. ವ್ಯಾಪ್ತಿಯ ಮಾನಂಪಾಡಿ ಗಜನಿ ಪ್ರದೇಶದಲ್ಲಿಯೂ ನೆರೆ ಉಂಟಾಗಿ ಅನೇಕ ಮನೆ, ರಸ್ತೆ ಜಲಾವೃತವಾಗಿದೆ.
ಮುಲ್ಕಿಯಿಂದ ವಿಜಯ ಕಾಲೇಜು ರಸ್ತೆ ಮಟ್ಟು ಗ್ರಾಮಕ್ಕೆ ಹೋಗುವಲ್ಲಿ ರಸ್ತೆ ತಡೆ ಉಂಟಾಗಿದ್ದು, ವಾಹನಗಳು ಸುತ್ತು ಬಳಸಿ ಅತಿಕಾರಿಬೆಟ್ಟು ಮುಖಾಂತರ ಪ್ರಯಾಣಿಸುತ್ತಿದೆ.
ಶಿಮಂತೂರಿನಲ್ಲಿ ರಸ್ತೆ ಮುಳುಗಡೆಯಾಗಿದೆ. ಮುಲ್ಕಿ ನ.ಪಂ. ವ್ಯಾಪ್ತಿಯ ಚಿತ್ರಾಪು ಕಲ್ಸಂಕ ಬಳಿ ಪುರಂದರ ಸಾಲಿಯಾನ್ ಅವರ ಸುಣ್ಣದ ಗೂಡಿಗೆ ಹಾನಿಯಾಗಿದ್ದು, ಸ್ಥಳೀಯರಾದ ನೊರೋಹ್ನ ಎಂಬವರ ಮನೆಗೆ ನೀರು ನುಗ್ಗಿದೆ.
ಬೋಟ್ ವಿಳಂಬ, ಆಕ್ರೋಶ: ಮಳೆಗಾಲ ಶುರುವಾಗುವ ಮೊದಲೇ ನೆರೆಪೀಡಿತ ಪ್ರದೇಶಗಳಿಗೆ ಬೋಟ್ ಸೌಲಭ್ಯ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದ್ದರೂ ಮುಲ್ಕಿ ನ.ಪಂ. ವ್ಯಾಪ್ತಿಯ ಮಾನಂಪಾಡಿ,ಮಟ್ಟುವಿನಲ್ಲಿ ಭಾನುವಾರ ಬೆಳಗಿನಿಂದ ನೆರೆ ಸಂತ್ರಸ್ತರನ್ನು ರಕ್ಷಿಸಲು ಯಾವುದೇ ಬೋಟ್ ಬಂದಿಲ್ಲ ಎಂದು ಸ್ಥಳೀಯ ಕೃಷಿಕ ಮಾಧವ ಪೂಜಾರಿ ಕೆಂಪುಗುಡ್ಡೆ ಆರೋಪಿಸಿದ್ದಾರೆ.
ಸ್ಥಳೀಯರು ತಹಸೀಲ್ದಾರ್ ಗೆ ದೂರು ನೀಡಿದ ಬಳಿಕ ಅಗ್ನಿಶಾಮಕ ದಳ ರಬ್ಬರ್ ಬೋಟ್ ಸಮೇತ ಆಗಮಿಸಿದೆ ಎಂದು ತಿಳಿಸಿದ್ದಾರೆ.
ನೆರೆ ಪ್ರದೇಶಗಳಿಗೆ ತೆರಳಿ ಅತಿಕಾರಿಬೆಟ್ಟು ಗ್ರಾಪಂ ಪಿಡಿಒ ರವಿ ಸ್ವತ: ಕಾರ್ಯಾಚರಣೆಗೆ ಇಳಿದು ರಕ್ಷಣೆ ಕಾರ್ಯ ಮಾಡಿದ್ದು, ಶ್ಲಾಘನೆ ವ್ಯಕ್ತವಾಗಿದೆ. ಸ್ಥಳಕ್ಕೆ ಮುಲ್ಕಿ ವಿಶೇಷ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದು, ನೆರೆ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದ್ದಾರೆ.
Kshetra Samachara
20/09/2020 09:16 pm