ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: 'ಆಟಿದ ಪೆಲಕಾಯಿ ನಂಜಿ ಮಗ ಅಮ್ಮೆ ಬತ್ತೆನಾ ತೂಲ ಮಗ' ಎಂಬ ಗಾದೆಯೊಂದು ಕರಾವಳಿಯಲ್ಲಿ ಪ್ರಚಲಿತದಲ್ಲಿದೆ. ಅಂದರೆ ಆಷಾಢದ ಹಲಸು ನಂಜು ಎಂದು ಜನಪದರು ನಂಬುತ್ತಾರೆ. ಏಕೆಂದರೆ ಈ ಸಮಯದಲ್ಲಿ ಮಳೆ ನೀರು ಬಿದ್ದ ಹಲಸಿನ ಹಣ್ಣು ತಿಂದರೆ ಶೀತ, ಜ್ವರ ಬಾಧಿಸಬಹುದೆಂದು ಭೀತಿಯಿಂದ ಮಳೆಗಾಲದಲ್ಲಿ ಹಲಸು ತಿನ್ನುವುದಕ್ಕೆ ವಿಧಿನಿಷೇಧವಿದೆ. ಆದರೆ ಇತ್ತೀಚಿಗೆ ಅಭಿವೃದ್ಧಿಗೊಂಡಿರುವ ಪೈನಾಪಲ್ ಹಲಸು ತಳಿ ಮಳೆಗಾಲದಲ್ಲಿಯೇ ತಿನ್ನಲು ಲಭ್ಯವಾಗುತ್ತದೆ. ಆದರೂ ಯಾವುದೇ ರೋಗಬಾಧೆಯ ಭೀತಿಯಿಲ್ಲದೆ ತಿನ್ನಬಹುದೆಂದರೆ ಅಚ್ಚರಿಯಲ್ಲವೇ.?
ಹೌದು. ಈ ಪೈನಾಪಲ್ ಹಲಸು ತಳಿ 80-100 ವರ್ಷಗಳಿಂದ ಇದ್ದರೂ, ಪ್ರಚಲಿತದಲ್ಲಿರಲಿಲ್ಲ. ಆದರೆ ಇತ್ತೀಚೆಗೆ ಮಂಗಳೂರಿನ ಚಿಗುರು ನರ್ಸರಿಯ ಬಿ.ಸರ್ವೇಶ್ ರಾವ್ ಈ ತಳಿಯ ವಿಶೇಷತೆಯನ್ನು ಗಮನಿಸಿ ಬೆಳಕಿಗೆ ತಂದಿದ್ದಾರೆ. ಪೈನಾಪಲ್ ತಳಿಯ ಹಲಸಿನಲ್ಲಿ ಬೀಜವು ಕಡಿಮೆ, ರಚ್ಚೆ ಹಾಗೂ ಗೂಂಜೂ ಇಲ್ಲದೆ ಒಳಗಡೆ ಬರೀ ಸೊಳೆಯಷ್ಟೇ ತುಂಬಿರುತ್ತದೆ. ಇದರ ಮೇಲಿನ ಸಿಪ್ಪೆ ಹಾಗೂ ಒಳಗಿನ ಗೂಂಜನ್ನು ಸಣ್ಣದಾಗಿ ತೆಗೆದು ಮಿಕ್ಕ ಎಲ್ಲವನ್ನೂ ತಿನ್ನಬಹುದು. ಮಾಮೂಲಿಯಾಗಿ ಹಲಸನ್ನು ತುಂಡರಿಸುವ ವೇಳೆ ಕಿರಿಕಿರಿ ಎನಿಸುವ ಮೇಣದ ಪ್ರಮಾಣವೂ ಇದರಲ್ಲಿ ಕಡಿಮೆ. ಮಳೆಗಾಲದಲ್ಲಿ ಬಲಿತರೂ ಮಳೆ ನೀರನ್ನು ಹಿಡಿದಿಟ್ಟುಕೊಳ್ಳದೆ ಈ ಹಲಸಿನ ಹಣ್ಣು ತಿನ್ನಲು ರುಚಿಕಟ್ಟಾಗಿರೋದು ಇದರ ವಿಶೇಷ.
ಈ ಹಲಸು ಹಣ್ಣಾಗಿ ತಿನ್ನಲಷ್ಟೇ ಅಲ್ಲ, ಎಳೆ ಗುಜ್ಜೆ ಪಲ್ಯಕ್ಕೆ, ಬಲಿತ ಗುಜ್ಜೆ ಪದಾರ್ಥಕ್ಕೆ, ಉಪ್ಪುನೀರಲ್ಲಿ ಹಾಕಿ ಶೇಖರಿಸಲು, ಪಾಯಸ ಸೇರಿದಂತೆ ಎಲ್ಲಾ ಖಾದ್ಯಗಳಿಗೂ ಬಳಸಲು ಯೋಗ್ಯ. ಕರಾವಳಿಯಲ್ಲಿ ಸಾಮಾನ್ಯವಾಗಿ ಮಾರ್ಚ್ - ಎಪ್ರಿಲ್ ಮಧ್ಯೆ ಹಲಸು ತಿನ್ನಲು ಲಭ್ಯವಾಗುತ್ತದೆ. ಆದರೆ ಪೈನಾಪಲ್ ತಳಿಯ ಹಲಸು ಜೂನ್ ನಲ್ಲಿ ತಿನ್ನಲು ಲಭ್ಯವಾಗಿ ಆಗಸ್ಟ್ ವರೆಗೂ ದೊಕುತ್ತದೆ. ಪೂರ್ತಿ ಬಲಿತರೆ ಮೇಲ್ಗಡೆ ಸಿಪ್ಪೆ ಕಪ್ಪುಬಣ್ಣಕ್ಕೆ ತಿರುಗುತ್ತದೆ. ಆಗ ನಮಗೆ ಹಣ್ಣು ಕೊಳೆತಂತೆ ಭಾಸವಾದರೂ ಆ ಬಳಿಕ ತಿಂದರಷ್ಟೇ ಅದರ ರುಚಿಯಾದ ಸ್ವಾದದ ಅನುಭವವಾಗುತ್ತದೆ. ಈ ಹಲಸನ್ನು ತುಂಡರಿಸಿದಾಗ ಒಳಗಡೆ ಪೈನಾಪಲ್ ರೀತಿಯಲ್ಲಿ ಕಾಣುವುದರಿಂದ ಇದನ್ನು ಪೈನಾಪಲ್ ಹಲಸು ಎಂದು ಹೆಸರಿಸಲಾಗಿದೆ. ಈ ತಳಿಯ ಅಭಿವೃದ್ಧಿಯತ್ತ ಸರ್ವೇಶ್ ರಾವ್ ಅವರು ಚಿತ್ತ ಹರಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪೈನಾಪಲ್ ತಳಿಯ ಹಲಸು ಕರಾವಳಿಯಲ್ಲಿ ಲಭ್ಯವಾಗಲಿದೆ.
ಪೈನಾಪಲ್ ಹಲಸು ತಳಿಯನ್ನು ಬೆಳಕಿಗೆ ತಂದವರು: ಬಿ.ಸರ್ವೇಶ್ ರಾವ್
Kshetra Samachara
15/08/2022 04:32 pm