ಮಂಗಳೂರು: ನಗರದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪಶ್ಚಿಮ ಘಟ್ಟದಲ್ಲಿ ಕಾಣಸಿಗದ ಅಪರೂಪದ ರೆಟಿಕ್ಯುಲೆಡ್ ಹೆಬ್ಬಾವು 50 ಮೊಟ್ಟೆಗಳಿಗೆ ಕಾವು ನೀಡುತ್ತಿದೆ. ನಿನ್ನೆಯಿಂದ ಈ ಮೊಟ್ಟೆಯಿಂದ ಹೆಬ್ಬಾವು ಮರಿಗಳು ಹೊರ ಬರಲಾರಂಭಿಸಿದೆ.
ರೆಟಿಕ್ಯುಲೆಟೆಡ್ ಹೆಬ್ಬಾವು ವಿಶ್ವದ ಅತೀ ಉದ್ದವಾಗಿ ಬೆಳೆಯುವ ಉರಗ ಸಂತತಿ. ಈ ಹೆಬ್ಬಾವು ಸುಮಾರು 30 ಅಡಿಗಳಷ್ಟು ಉದ್ದವಾಗಿ ಬೆಳೆಯುತ್ತದೆ. ಪಶ್ಚಿಮ ಘಟ್ಟಗಳಲ್ಲಿ ವಾಸಿಸದ ಈ ಹೆಬ್ಬಾವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಾಣಸಿಗುತ್ತವೆ.
ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಚೆನ್ನೈನಿಂದ ಐದು ವರ್ಷಗಳ ಹಿಂದೆ ಐದು ರೆಟಿಕ್ಯುಲೇಟೆಡ್ ಹೆಬ್ಬಾವನ್ನು ತರಿಸಲಾಗಿತ್ತು. ಇದರಲ್ಲಿ ಎರಡು ರೆಟಿಕ್ಯುಲೇಟೆಡ್ ಹೆಬ್ಬಾವು ಇದೀಗ ಒಟ್ಟು 50 ಮೊಟ್ಟೆಗಳನ್ನು ಇಟ್ಟಿವೆ. ತಾಯಿ ಹೆಬ್ಬಾವುಗಳು ಸ್ವತಃ ತಾವೇ ತಮ್ಮ ಮೊಟ್ಟೆಗಳಿಗೆ ಕಾವು ಕೊಡುತ್ತಿದೆ. ಸದ್ಯ ಮರಿಗಳು ಹೊರಬರಲು ಆರಂಭವಾಗಿದ್ದು ಇನ್ನೆರಡು ದಿನಗಳಲ್ಲಿ ಎಲ್ಲಾ ಮರಿಗಳು ಮೊಟ್ಟೆಯೊಡೆದು ಬರಲಿದೆ.
ರೆಟಿಕ್ಯುಲೇಟೆಡ್ ಹೆಬ್ಬಾವು ಪಶ್ಚಿಮ ಘಟ್ಟಗಳಲ್ಲಿ ವಾಸಿಸದ ಅಪರೂಪದ್ದಾಗಿದ್ದರಿಂದ ಇವುಗಳ ಮರಿಗಳನ್ನು ಕಾಡಿಗೆ ಬಿಡಲಾಗುತ್ತಿಲ್ಲ .ಅಗತ್ಯವಿರುವ ಪ್ರಾಣಿ ಸಂಗ್ರಹಾಲಯಗಳಿಗೆ ಪ್ರಾಣಿ ವಿನಿಮಯ ಯೋಜನೆಯಡಿ ಈ ಹೆಬ್ಬಾವು ಮರಿಗಳನ್ನು ನೀಡಲಾಗುತ್ತದೆ.
Kshetra Samachara
15/07/2022 07:29 pm