ಮಂಗಳೂರು: ಕರ್ನಾಟಕ ಕರಾವಳಿಯಲ್ಲಿ ಈ ಋತುಮಾನದ ಯಾಂತ್ರೀಕೃತ ಸಮುದ್ರ ಮೀನುಗಾರಿಕೆಗೆ ಆಗಸ್ಟ್ 1ರಿಂದ ಹಸಿರು ನಿಶಾನೆ ಸಿಕ್ಕಿದ್ದರೂ ಅಲೆಗಳ ಅಬ್ಬರ, ಪೂರ್ಣ ಕುಗ್ಗದ ಮಳೆ- ಮಾರುತದ ಪರಿಣಾಮ ಮತ್ಸ್ಯ ಗಾರಿಕೆ ಸಂಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ.
ಸದ್ಯಕ್ಕೆ ಬೆರಳೆಣಿಕೆಯಷ್ಟೇ ಆಳಕಡಲ ಬೋಟ್ ಗಳು ಹಾಗೂ 'ರಾಣಿ ಬಲೆ' ನಾಡದೋಣಿಗಳು ಮಾತ್ರ ಕಡಲಲ್ಲಿ ಮೀನು ಶಿಕಾರಿಯಲ್ಲಿ ತೊಡಗಿವೆ. ಎಂದಿನಂತೆ ಸಾಂಪ್ರದಾಯಿಕ ರೀತಿಯಲ್ಲಿ ನದಿ ಮೀನುಗಾರಿಕೆ ನಡೆಯುತ್ತಿವೆ. ಈ ನಡುವೆ 'ವನ್ ಮ್ಯಾನ್ ಶೋ' ಹಿರಿಮೆಯ, ತೋಳ್ಬಲ ಪ್ರದರ್ಶನ ಕಲಾ ಚಾತುರ್ಯದ 'ಬೀಸುಬಲೆ' ಮೀನುಗಾರಿಕೆಯಲ್ಲಿ ಮೀನುಗಾರರು ನಿರತರಾಗಿರುವುದು ನದಿ, ಶರಧಿ ಕಿನಾರೆಯಲ್ಲಿ ಕಂಡು ಬರುತ್ತಿವೆ.
ನೀರಿನ ಹರಿವು, ಮೀನಿನ ಇರವು ಜತೆಗೆ ಗಾಳಿಯ ಚಲನೆ ಗುರುತಿಸಿ, ರೊಯ್ಯನೆ ಬಲೆ ಬೀಸುವ ನಿಪುಣತೆಯಿರಬೇಕು. ಎಲ್ಲ ಸಕ್ರಿಯ ಮೀನುಗಾರರು ಬೀಸುಬಲೆಯಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಕೆಲವರಿಗಷ್ಟೇ ಆ 'ಕಲೆಗಾರಿಕೆ' ಒಗ್ಗುತ್ತದೆ. ವೃತ್ತಾಕಾರವಾಗಿ ಜಲಕ್ಕೆರಗಿ ತಳ ಕಾಣುವ ಆ ಬಲೆಯ ಎಸೆಯುವಿಕೆ ನೋಟ ಕಣ್ಮನ ಸೆಳೆಯುತ್ತದೆ.
ಮನೋಜ್ ಕೆ.ಬೆಂಗ್ರೆ, ಪಬ್ಲಿಕ್ ನೆಕ್ಸ್ಟ್
Kshetra Samachara
08/08/2021 10:38 am