ಮಂಗಳೂರು: ನಗರ ಹೊರವಲಯದ ಮುಕ್ಕದಲ್ಲಿ ಫಿಶ್ ಮಿಲ್ ಕಾರಣದಿಂದ ಮೂಗು ಮುಚ್ಚಿಕೊಂಡು ಬದುಕುವ ಸ್ಥಿತಿ ಎದುರಾಗಿದೆ. ಪ್ರತಿದಿನವೂ ತ್ಯಾಜ್ಯವನ್ನು ನೇರವಾಗಿ ಸಮುದ್ರಕ್ಕೆ ಬಿಡಲಾಗುತ್ತಿದೆ.
ಈ ಬಗ್ಗೆ ಪರಿಸರ ಇಲಾಖೆ, ಜಿಲ್ಲಾಡಳಿತ, ಪೊಲೀಸರಿಗೆ ದೂರು ನೀಡಿದರೂ ಏನೂ ಪ್ರಯೋಜನ ಆಗಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.
ಈ ಬಗ್ಗೆ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾಹಿತಿ ನೀಡಿದ ನಿವೃತ್ತ ಯೋಧ ಪಿ.ಆರ್.ಪಿ ಶೆಟ್ಟಿ , ಮುಕ್ಕದಲ್ಲಿ ಮೂರು ಫಿಶ್ ಮಿಲ್ ಗಳಿದ್ದು ಎಚ್.ಕೆ.ಬಾವಾ ಫಿಶ್ ಮಿಲ್, ಬಾವಾ ಫಿಶ್ ಮಿಲ್ ಸನ್ಸ್, ಮುಕ್ಕ ಸೀಫುಡ್ ಇಂಡಸ್ಟ್ರೀಸ್ ಅಲ್ಲಿನ ಜನರ ಬಾಳನ್ನು ನರಕ ಮಾಡಿದೆ.
ಇದರ ಮಾಲೀಕರು ಪ್ರಭಾವಿಯಾಗಿದ್ದು, ಯಾವುದೇ ದೂರು ನೀಡಿದರೂ ಅದು ಪ್ರಭಾವ ಬೀರದಂತೆ ಮಾಡುತ್ತಾರೆ. ಇದರ ಬಳಿಯಲ್ಲೇ ಇರುವ ಸಸಿಹಿತ್ಲು ಬೀಚ್ ವಿಶ್ವಖ್ಯಾತಿ ಪಡೆದಿದ್ದು, ದೇಶ-ವಿದೇಶದ ಸರ್ಫರ್ ಗಳು ಪ್ರತಿವರ್ಷ ಭೇಟಿ ನೀಡುತ್ತಾರೆ.
ಇಂತಹ ಜಾಗದಲ್ಲಿ ಕೊಳೆತ ಮೀನುಗಳನ್ನು ತಂದು ಎಣ್ಣೆ ತೆಗೆಯುವ ಫ್ಯಾಕ್ಟರಿ ಮಾಡಿದ್ದಾರೆ. ಇದು ರಾತ್ರಿ- ಹಗಲು ಕಾರ್ಯಾಚರಿಸುತ್ತಿದ್ದು, ಈ ನಿರಂತರ ಸದ್ದಿಗೆ ನಿದ್ದೆ ಬಾರದಂತಾಗಿದೆ. ಕಪ್ಪು ಹೊಗೆಯಿಂದಾಗಿ ಪರಿಸರದಲ್ಲಿ ಮನೆಗಳಿಗೆ ಮಸಿ ಬೀಳುತ್ತಿದೆ ಎಂದು ಆರೋಪಿಸಿದ್ದಾರೆ.
Kshetra Samachara
12/01/2021 06:15 pm