ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ನವಿಲಿನ' ನಾಟ್ಯ ; ಭಕ್ತರೊಂದಿಗೆ ಬೆರೆಯುತ್ತದೆ ಈ 'ಮಯೂರ'

ಮಂಗಳೂರು : 'ನೀಲಗಗನದೊಳು ಮೇಘಗಳ ಕಂಡಾಗಲೆ ನಲಿಯುತ ನವಿಲು ಕುಣಿಯುತಿದೆ ನೋಡೆ' ಎಂಬ ಕಾಳಿಂಗ ನಾವಡರ ಪದ್ಯ ಯಕ್ಷಗಾನ ಪ್ರಿಯರಿಗೆ ನೆನಪಿರಲೇಬೇಕು. ಆದರೆ ಇಲ್ಲೊಂದು ನವಿಲು ಜನರನ್ನು ಕಂಡಾಗ ಗರಿಬಿಚ್ಚಿ ನರ್ತಿಸುತ್ತಿದೆ. ಮೊಬೈಲ್ ತೆಗೆದು ಸೆಲ್ಫಿ ಕ್ಲಿಕ್ಕಿಸುವುದೇ ತಡ ನಾಟ್ಯವನಾಡಿ ಎಲ್ಲರ ಚಿತ್ತಾಕರ್ಷಿಸುತ್ತದೆ.

ಮಂಗಳೂರಿನ ಹೊರವಲಯದ ನೀರುಮಾರ್ಗದ ಮಾಣೂರು ಶ್ರೀಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿರುವ ಈ ನವಿಲಿನ ಗರಿಬಿಚ್ಚಿ ಕುಣಿವ ವೀಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ದೇವಸ್ಥಾನದ ಪಕ್ಕದಲ್ಲಿಯೇ ಇರುವ ಅರ್ಚಕ ರಾಜೇಶ್ ಭಟ್ ಅವರ ಮನೆಗೆ ಬಂದ ನೆಂಟರ ಮಗುವೊಂದರ ಜೊತೆ ನವಿಲು ಗರಿ ಬಿಚ್ಚಿ ನರ್ತನ ಮಾಡಿತ್ತು.

ಈ ವೀಡಿಯೋ ಭಾರೀ ವೈರಲ್ ಆಗಿತ್ತು. ಈ ನವಿಲು ಕಳೆದ ಏಳೆಂಟು ವರ್ಷಗಳಿಂದಲೂ ಈ ದೇವಸ್ಥಾನದಲ್ಲಿದೆ. ಸ್ಥಳೀಯ ನಿವಾಸಿಯೊಬ್ಬರು ತಮಗೆ ದೊರೆತ ಮೂರು ತತ್ತಿಯನ್ನು ಕೋಳಿಯ ಕಾವಿಗೆ ಇಟ್ಟಿದ್ದರು. ತತ್ತಿ ಒಡೆದು ಕೋಳಿ ಮರಿಯೊಂದಿಗೆ ಈ ನವಿಲಿನ ಮರಿಗಳು ಹೊರ ಬಂದಿತ್ತು. ಅವರು ಈ ನವಿಲ ಮರಿಗಳನ್ನು ದೇವಸ್ಥಾನಕ್ಕೆ ಒಪ್ಪಿಸಿದ್ದಾರೆ.

ಎರಡೂ ಎಲ್ಲೋ ಹೋಗಿತ್ತು. ಆದರೆ ಈ ನವಿಲು ಮಾತ್ರ ದೇವಸ್ಥಾನದ ಪರಿಸರ, ಸುತ್ತಮುತ್ತಲಿನ ಮನೆಗಳ ಪರಿಸರದಲ್ಲಿಯೇ ಇದೆ. ಐದಾರು ವರ್ಷಗಳಾಗಿರುವ ಈ ನವಿಲಿಗೆ ದೇವಾಲಯದ ಅರ್ಚಕ ರಾಜೇಶ್ ಭಟ್ 'ಮಯೂರ'ವೆಂದು ಹೆಸರಿಟ್ಟಿದ್ದಾರೆ.

ಅರ್ಚಕರ ಕರೆಗೆ ಸ್ಪಂದಿಸಿ ಮೆಲ್ಲನೆ ಹೆಜ್ಜೆಯಿರಿಸಿ ಹತ್ತಿರಕ್ಕೆ ಬರುತ್ತದೆ. ಅವರು ಮಾಡುವ ಹಾವಭಾವಕ್ಕೆ ತಕ್ಕಂತೆ ಸ್ಪಂದಿಸುತ್ತದೆ. ಈ ಮಯೂರ ಪ್ರತಿದಿನವೂ ರಾತ್ರಿ ಪೂಜೆಯ ವೇಳೆ ನಮಸ್ಕಾರ ಮಂಟಪಕ್ಕೆ ತಪ್ಪದೇ ಬರುತ್ತದೆ.

ದೇವಸ್ಥಾನ ಪರಿಸರದಲ್ಲಿಯೇ ಇರುವ ಈ ನವಿಲು ಭಕ್ತರೊಂದಿಗೆ ಸುಲಭದಲ್ಲಿ ಬೆರೆಯುತ್ತದೆ. ಅವರ ಸೆಲ್ಫಿಗೆ ನರ್ತನ ಮಾಡಿ ಪೋಸ್ ಕೊಡುತ್ತದೆ. ಮೊಬೈಲ್ ಕಂಡರೆ ಎಷ್ಟು ಹೊತ್ತು ಬೇಕಾದರೂ ಗರಿಬಿಚ್ಚಿ ನರ್ತಿಸುತ್ತದೆಯಂತೆ. ಒಟ್ಟಿನಲ್ಲಿ ಕಾಡುಪಕ್ಷಿಯಾದರೂ ಈ ನವಿಲು ಮನುಷ್ಯ ಪ್ರೀತಿಯನ್ನು ಬಯಸುತ್ತಿರುವುದು ಸೋಜಿಗವೇ ಸರಿ.

Edited By : Manjunath H D
PublicNext

PublicNext

17/06/2022 09:41 pm

Cinque Terre

67.04 K

Cinque Terre

1

ಸಂಬಂಧಿತ ಸುದ್ದಿ