ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : " ಈ ಕಂದಮ್ಮನ ಸಾವು ನ್ಯಾಯವೇ? "

ವರದಿ: ರಹೀಂ ಉಜಿರೆ

ಬೈಂದೂರು: ಈ ಮಳೆಗಾಲದುದ್ದಕ್ಕೂ ಪಬ್ಲಿಕ್ ನೆಕ್ಸ್ಟ್ ಹಿಂದುಳಿದ ವಿಧಾನಸಭೆ ಕ್ಷೇತ್ರ ಬೈಂದೂರಿನ ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿತ್ತು.ಮುಖ್ಯವಾಗಿ ತಾಲೂಕಿನಲ್ಲಿ ಸಂಪರ್ಕ ಸೇತುವೆಗಳ ಕೊರತೆಯದ್ದೇ ದೊಡ್ಡ ಸಮಸ್ಯೆ.ಇದರ ಪರಿಣಾಮವಾಗಿ ಗ್ರಾಮಸ್ಥರು ಈ ಬಾರಿಯ ಮಳೆ-ನೆರೆಗೆ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದಾರೆ. ನಿನ್ನೆ ಏಳು ವರ್ಷದ ಮಗು ಕಾಲುಸಂಕ ದಾಟುವಾಗ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು, ಈ ಊರು ಮೂಲಭೂತ ಸೌಕರ್ಯದಿಂದ ವಂಚಿತವಾಗಿರುವುದಕ್ಕೆ ಹಿಡಿದ ಕನ್ನಡಿ.

ನಿನ್ನೆ ತಾಲೂಕಿನ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಕಾಲುಸಂಕ ದಾಟುವಾಗ ಸನ್ನಿಧಿ ಎಂಬ ಎರಡನೇ ತರಗತಿಯ ಬಾಲಕಿ ಕೊಚ್ಚಿಕೊಂಡು ಹೋಗಿದ್ದಳು.ಈಕೆಗಾಗಿ ರಾತ್ರಿತನಕ ಶೋಧ ಕಾರ್ಯ ನಡೆಸಿದರೂ ಮಗುವಿನ ಸುಳಿವು ಇನ್ನೂ ಪತ್ತೆಯಾಗಿಲ್ಲ.ಇದರಿಂದ ಗ್ರಾಮಕ್ಕೆ ಗ್ರಾಮವೇ ಶೋಕದಲ್ಲಿ ಮುಳುಗಿದೆ.ತಮ್ಮದಲ್ಲದ ತಪ್ಪಿಗೆ ಕುಟುಂಬವೊಂದು ಮಗುವನ್ನು ಕಳೆದುಕೊಂಡಿದೆ.

ಬಿಜಮಕ್ಕಿಯಲ್ಲಿ ಕಿರು ಸೇತುವೆ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ದಶಕಗಳ ಬೇಡಿಕೆಯಾಗಿತ್ತು.ಕಾರಣ ಈ ಕಾಲುಸಂಕವನ್ನೇ ಆಶ್ರಯಿಸಿ 40 ಕುಟುಂಬಗಳು ವಾಸ ಮಾಡುತ್ತಿದ್ದವು. ಅನೇಕ ವರ್ಷಗಳಿಂದ ಊರವರು ಸಂಬಂಧಪಟ್ಟ ಜನಪ್ರತಿನಿಧಿಗಳ ಮುಂದೆ ಬೇಡಿಕೆ ಇಟ್ಟಿದ್ದರೂ ಇಲ್ಲಿಯ ವರೆಗೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ತಾಲೂಕಿನಲ್ಲಿ ಈ ವರ್ಷ ಅತ್ಯಧಿಕ ಮಳೆಯಾಗುತ್ತಿತ್ತು.ಕಳೆದ ಮೂರ್ನಾಲ್ಕು ದಿನಗಳಿಂದ ದಿನವಿಡೀ ಮಳೆ ಸುರಿದಿದೆ. ಆದರೂ ಇಂತಹ ದುರ್ಗಮ ಹಾದಿಯಿರುವ ಕಡೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ರಜೆ ಯಾಕೆ ನೀಡದೆ ನಿರ್ಲಕ್ಷ್ಯ ವಹಿಸಲಾಯಿತು ಎನ್ನುವ ಪ್ರಶ್ನೆ ಸಾರ್ವಜನಿಕರದ್ದು. ದಿನವಿಡೀ ಮಳೆ ಬಂದಿದ್ದರಿಂದ ನದಿ, ಕಾಲು ಸಂಕ ದಾಟಿ ಹೋಗಬೇಕಾದ ಮಕ್ಕಳ ಬಗ್ಗೆ ಪೋಷಕರು, ಶಿಕ್ಷಕರು ಗಮನವೇ ಹರಿಸಿಲ್ಲವೇ ಎನ್ನುವ ಪ್ರಶ್ನೆಯೂ ಮೂಡಿದೆ.

ನಿನ್ನೆ ಘಟನಾ ಸ್ಥಳಕ್ಕೆ ಆಗಮಿಸಿದ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.ಐವರು ಮಕ್ಕಳನ್ನು ಕಾಲು ಸೇತುವೆ ದಾಟಿಸುವ ವೇಳೆ ಈ ಮಗು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿದೆ.ಬಾಲಕಿ ಮನೆಗೆ ಭೇಟಿ ಕೊಟ್ಟು ಸಂತಾಪ ಸೂಚಿಸಿದ್ದೇನೆ.ಘಟನೆ ನಡೆದ ಕಾಲ್ತೋಡು ಕಾಲು ಸೇತುವೆ ಸ್ಥಳದಲ್ಲಿ ಕಿರು ಸೇತುವೆ ಮಾಡಲು ಸೂಚನೆ ನೀಡಲಾಗಿದೆ.ಹತ್ತು ಲಕ್ಷ ಅನುಮೋದನೆ ಸಿಕ್ಕಿದ್ದು ಕೂಡಲೇ ಕಿರು ಸೇತುವೆ ನಿರ್ಮಾಣ ಪ್ರಾರಂಭಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Edited By : Manjunath H D
PublicNext

PublicNext

09/08/2022 11:12 am

Cinque Terre

44.52 K

Cinque Terre

6

ಸಂಬಂಧಿತ ಸುದ್ದಿ