ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆ ಗಾಳಿಗೆ ಅಪಾರ ಹಾನಿ ಸಂಭವಿಸಿದೆ. ತಾಲೂಕು ವ್ಯಾಪ್ತಿಯ ಹಳೆಯಂಗಡಿ ಮಾರುಕಟ್ಟೆ ಹಿಂಭಾಗದಲ್ಲಿ ತೆಂಗಿನ ಮರ ವಿದ್ಯುತ್ ವಯರ್ ಮೇಲೆ ಬಿದ್ದು ಏಕನಾಥ ಕೋಟ್ಯಾನ್ (ಕುಟ್ಟಿಯಣ್ಣ) ಎಂಬುವರ ಮನೆಯ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದ್ದು ಮನೆಯಲ್ಲಿದ್ದವರು ಪವಾಡ ಸದೃಶ ಪಾರಾಗಿದ್ದಾರೆ
ಇನ್ನೊಂದೆಡೆ ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ತೆರೆದ ಬಾವಿಗೆ ಬಿದ್ದು ಭಾರಿ ನಷ್ಟ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ಹಳೆಯಂಗಡಿ ಮೆಸ್ಕಾಂ ಇಲಾಖೆ ಅಧಿಕಾರಿಗಳು ಧಾವಿಸಿ ಹೆಚ್ಚಿನ ಅಪಾಯ ಸಂಭವಿಸದಂತೆ ಕ್ರಮ ಕೈಗೊಂಡಿದ್ದಾರೆ. ಮನೆಯ ಮೇಲೆ ಬಿದ್ದ ತೆಂಗಿನ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಸ್ಥಳಕ್ಕೆ ಹಳೆಯಂಗಡಿ ಪಂಚಾಯತ್ ಉಪಾಧ್ಯಕ್ಷ ಅಶೋಕ್, ಸದಸ್ಯ ಅಬ್ದುಲ್ ಅಜೀಜ್, ಅಬ್ದುಲ್ ಖಾದರ್, ವಿನೋದ್ ಕುಮಾರ್, ಚಂದ್ರ ಕುಮಾರ್ ಅನಿಲ್ ಪೂಜಾರಿ ಕಂದಾಯ ಇಲಾಖೆಯ ನವೀನ್, ಮೆಸ್ಕಾಂ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
Kshetra Samachara
24/08/2022 08:16 pm