ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಶುಕ್ರವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಿನ್ನಿಗೋಳಿ, ಕಟೀಲು, ಪಕ್ಷಿಕೆರೆ, ಪಂಜ, ಹಳೆಯಂಗಡಿ, ತೋಕೂರು ಪ್ರದೇಶದಲ್ಲಿ ಬಿರುಸಿನ ಮಳೆಯಿಂದ ಕೃತಕ ನೆರೆ ಉಂಟಾಗಿದೆ.
ನಿರಂತರ ಮಳೆಗೆ ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ತೋಕೂರು ಪಡುಪಣಂಬೂರು ರಸ್ತೆ ಕಲ್ಲಾಪು ಮಾಗಂದಡಿ ಬಳಿ ಮುಳುಗಡೆಯಾಗಿದ್ದು, ಪ್ರಯಾಣಕ್ಕೆ ವಾಹನ ಸವಾರರು ಪರದಾಡಬೇಕಾಯಿತು. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಹಾಗೂ ಲೈಟ್ ಹೌಸ್ ಹೋಗುವ ರಸ್ತೆ ಕೃತಕ ನೆರೆಗೆ ಮುಳುಗಡೆಯಾಗಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಧರ್ಮಾನಂದ ಶೆಟ್ಟಿಗಾರ್ ತಿಳಿಸಿದ್ದು, ಪರಿಹಾರ ಕ್ರಮಗಳಿಗೆ ರಕ್ಷಣಾ ಪಡೆ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ಜೋರು ಮಳೆ, ಗಾಳಿಗೆ ಕಿನ್ನಿಗೋಳಿ, ಮುಲ್ಕಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಕುಬೆವೂರು ಬಳಿ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು ಹೆದ್ದಾರಿಗೆ ಬಿದ್ದಿದ್ದು ಸ್ಥಳೀಯರು ತೆರವುಗೊಳಿಸಿದ್ದಾರೆ ಎಂದು ಜಯಕರ್ನಾಟಕ ಸಂಘಟನೆಯ ಭಾಸ್ಕರ ಶೆಟ್ಟಿಗಾರ್ ತಿಳಿಸಿದ್ದಾರೆ. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ಹಾನಿಯಾಗಿದ್ದು, ಪರಿಸರದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಮುಲ್ಕಿ ಹೋಬಳಿಯ ನೆರೆಪೀಡಿತ ಪ್ರದೇಶವಾದ ಮಾನಂಪಾಡಿ, ಕಿಲ್ಪಾಡಿ ಕುಮಾರಮಂಗಲ, ಅತ್ತೂರು ಪಂಜ, ಕಿಲೆಂಜೂರು ಹಾಗೂ ನಂದಿನಿ, ಶಾಂಭವಿ ನದಿಗಳು ಬಲು ಜೋರಾಗಿ ಹರಿಯುತ್ತಿದ್ದು ನದಿ ತೀರ ಪ್ರದೇಶ ವಾಸಿಗಳು ಜಾಗೃತರಾಗಿರುವಂತೆ ಸೂಚಿಸಲಾಗಿದೆ ಹಾಗೂ ಯಾವುದೇ ಅಪಾಯ ಎದುರಿಸುವಂತೆ ರಕ್ಷಣಾ ಪಡೆ ಸನ್ನದ್ಧವಾಗಿದೆ ಎಂದು ಮುಲ್ಕಿಯ ವಿಶೇಷ ತಹಸೀಲ್ದಾರ್ ಮಾಣಿಕ್ಯ ಎನ್. ತಿಳಿಸಿದ್ದಾರೆ.
Kshetra Samachara
19/09/2020 04:13 pm