ಮುಲ್ಕಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಪಕ್ಷಿಕೆರೆ ಸಮೀಪದ ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಉಳ್ಯ, ಮೊಗಪಾಡಿ, ಕೊಯ್ಕುಡೆ, ಬೈಲಗುತ್ತು, ಪಂಜ ಸಂಪೂರ್ಣ ಜಲಾವೃತವಾಗಿದ್ದು, ಭತ್ತದ ಕೃಷಿಗೆ ವ್ಯಾಪಕ ಹಾನಿಯುಂಟಾಗಿದೆ.
ನಂದಿನಿ ನದಿಯ ಕವಲು ಇಲ್ಲಿ ಹರಿಯುತ್ತಿದ್ದು ಮಳೆಯಿಂದಾಗಿ ನೆರೆ ನೀರು ಉಕ್ಕಿ ತೋಟಕ್ಕೆ ಹರಿಯುತ್ತಿದೆ. ಉಪ್ಪು ನೀರು ನುಗ್ಗಿ ಗದ್ದೆ, ತೋಟಕ್ಕೆ ಹಾನಿಯಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಬೈಲಗುತ್ತು, ಪಂಜ ತಗ್ಗು ಪ್ರದೇಶವಾಗಿದ್ದು ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹೊಳೆಯಂತಾಗಿದೆ.
ಇಲ್ಲಿನ ಜನರು ಭತ್ತ, ತೆಂಗು ಕೃಷಿಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದು ನೆರೆಯಿಂದಾಗಿ ತುಂಬಲಾರದ ನಷ್ಟವುಂಟಾಗಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕೆಂದು ಕೃಷಿಕ ಚಂದ್ರಹಾಸ್ ಶೆಟ್ಟಿ ಮೊಗಪಾಡಿ ಅವರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಕೆಮ್ರಾಲ್ ಗ್ರಾ.ಪಂ. ಉಪಾಧ್ಯಕ್ಷ ಸುರೇಶ್ ಪಂಜ, ಸದಸ್ಯ ಕೇಶವ ಪೂಜಾರಿ ಪಂಜ ಭೇಟಿ ನೀಡಿದ್ದಾರೆ.
Kshetra Samachara
01/07/2022 05:06 pm