ವಿಶೇಷ ವರದಿ: ರಹೀಂ ಉಜಿರೆ
ಕುಂದಾಪುರ/ ಕುತ್ಪಾಡಿ: ಭತ್ತ ಬೆಳೆಗಾರರು ಮೊದಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು ಈ ಮಧ್ಯೆ ಭತ್ತಕ್ಕೆ ಬೆಂಬಲ ಬೆಲೆ ನೀಡಿ ಎಂದು ದೊಡ್ಡ ಹೋರಾಟವನ್ನೇ ನಡೆಸಿದ್ದುಂಟು. ಬೆಂಬಲ ಬೆಲೆ ಇನ್ನೂ ಘೋಷಣೆ ಆಗಿಲ್ಲ. ಇದೆಲ್ಲದರ ಜೊತೆಗೆ ಅಕಾಲಿಕ ಮಳೆ ಭತ್ತ ಕೃಷಿಕರ ಗಾಯದ ಮೇಲೆ ಬರೆ ಎಳೆದಿದೆ!
ಹೌದು ...ಕರಾವಳಿಯ ಭಕ್ತ ಕೃಷಿಕರು ನತದೃಷ್ಟರು ಎಂದೇ ಹೇಳಬೇಕು.ಕರಾವಳಿಯ ಒಂದಷ್ಟು ಭೂಮಿಗಳಲ್ಲಿ ನಗರೀಕರಣದ ಪ್ರಭಾವದಿಂದಾಗಿ ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳು ಎದ್ದಿವೆ. ಅಳಿದುಳಿದ ಗದ್ದೆಗಳಲ್ಲಿ ಭತ್ತ ಕೃಷಿಕರು ಭತ್ತ ಬೇಸಾಯ ಮಾಡುತ್ತಾ ಅದು ಹೇಗೋ ದಿನದೂಡುತ್ತಿದ್ದರು. ಆದರೆ ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿ ಎಂಬ ಕೃಷಿಕರ ಬೇಡಿಕೆ ಇನ್ನೂ ಈಡೇರದೆ ಉಳಿದಿದೆ. ಇದರ ಜೊತೆಗೆ ಕೃಷಿ ಕೂಲಿಯಾಳುಗಳ ಸಮಸ್ಯೆ ಕೂಡ ಇದೆ. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಒಂದಷ್ಟು ಬೇಸಾಯ ಮಾಡಿ ಹೊಟ್ಟೆ ತುಂಬಿಸುವ ಕೆಲಸವನ್ನು ಭತ್ತ ಕೃಷಿಕರು ಮಾಡುತ್ತಿದ್ದಾರೆ. ಆದರೆ ಈ ವರ್ಷದ ಅಕಾಲಿಕ ಮಳೆಯಿಂದಾಗಿ ಕೃಷಿಕರ ಬದುಕು ಕಷ್ಟದಲ್ಲಿದೆ. ಫಸಲಿಗೆ ಬಂದ ಭತ್ತದ ಪೈರು ಈಗಾಗಲೇ ಮಳೆ ನೀರಿಗೆ ಆಹುತಿ ಆಗಿದೆ. ಹಲವೆಡೆ ಗದ್ದೆಗಳು ನೀರಲ್ಲಿ ಕೊಚ್ಚಿ ಹೋಗಿವೆ. ಆದಷ್ಟು ಬೇಗ ಬೆಳೆಹಾನಿ ಸಮೀಕ್ಷೆ ಮಾಡಿ ಪರಿಹಾರ ಘೋಷಣೆ ಮಾಡಬೇಕು ಎಂದು ಭತ್ತ ಕೃಷಿಕರು ಅಳಲು ತೋಡಿಕೊಂಡಿದ್ದಾರೆ.
ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ 86 ಹೆಕ್ಟೇರ್ (215 ಎಕರೆ) ಪ್ರದೇಶದಲ್ಲಿ ಭತ್ತದ ಕೃಷಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಕುಂದಾಪುರ ತಾಲೂಕಿನಲ್ಲೇ ಹೆಚ್ಚು ಹಾನಿ ಸಂಭವಿಸಿದೆ. ಕಳೆದ ಸೆಪ್ಟೆಂಬರ್ - ಅಕ್ಟೋಬರ್ ನಲ್ಲಿ ಅಂಪಾರು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪೈರು ಗದ್ದೆಯಲ್ಲೇ ಮಲಗಿದ್ದು, ಭತ್ತದ ಮೊಳಕೆ ಯೊಡೆದಿದೆ. ಇನ್ನೊಂದೆಡೆ ಕೃಷಿ ಕೂಲಿಯಾಳುಗಳ ಸಮಸ್ಯೆಯಿಂದಾಗಿ ಕೃಷಿಕರು ಯಂತ್ರೋಪಕರಣಗಳ ಮೊರೆ ಹೋಗಿದ್ದು ಅಲ್ಲೂ ಕೂಡ ದುಬಾರಿ ದರ ಇರುವುದರಿಂದಾಗಿ ಕೃಷಿಕರು ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ.
ಇತ್ತೀಚೆಗೆ ಸಚಿವೆ ಶೋಭಾ ಕರಂದ್ಲಾಜೆ ಭತ್ತ ಖರೀದಿ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಹೇಳಿದ್ದರು.ಆ ಭರವಸೆಯೂ ಹುಸಿಯಾಗಿದೆ.ತಕ್ಷಣ ಜಿಲ್ಲಾ ಮಟ್ಟದ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಮಾಡಿ ಭತ್ತ ಕೃಷಿಕರಿಗೆ ಗರಿಷ್ಠ ಪರಿಹಾರ ನೀಡಿ ಅವರ ನೆರವಿಗೆ ಧಾವಿಸಬೇಕಿದೆ.
Kshetra Samachara
22/11/2021 06:51 pm