ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಶನಿವಾರ ದಿಂದ ಭಾನುವಾರವಿಡೀ ಮಳೆಯಾಗಿದ್ದು, ಸೋಮವಾರ ಮಳೆ ಸ್ವಲ್ಪ ಮಟ್ಟಿಗೆ ವಿಶ್ರಾಂತಿ ನೀಡಿದರೂ ಮತ್ತೆ ಮಳೆ ಶುರುವಾಗಿದ್ದು ಜನರನ್ನು ಆತಂಕಕ್ಕೀಡುಮಾಡಿದೆ. ಸೋಮವಾರ ಬೆಳಗ್ಗೆ ಮಳೆ ಕಡಿಮೆಯಾದರೂ ಮಟ್ಟು ಪ್ರದೇಶದಲ್ಲಿ ನೆರೆ ಮಾತ್ರ ಇಳಿದಿಲ್ಲ ಎಂದು ಕೃಷಿಕ ಸಚಿನ್ ಮಟ್ಟು ಹೇಳಿದ್ದಾರೆ.
ಮುಲ್ಕಿ ಹೋಬಳಿಯ ಮಾನಂಪಾಡಿ,ಮಟ್ಟು, ಕಿಲೆಂಜೂರು, ಹಳೆಯಂಗಡಿಯ ಕುದ್ರು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಭಾನುವಾರ ಜಲಾವೃತವಾಗಿದ್ದು, ಸೋಮವಾರ ನೆರೆ ಸಂಪೂರ್ಣ ಹತೋಟಿಗೆ ಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಾನಂಪಾಡಿ ಗಜನಿ ಪ್ರದೇಶದಲ್ಲಿ ರಸ್ತೆಯಲ್ಲಿ ನೆರೆ ನೀರು ನಿಂತಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಟ್ಟು, ಮಾನಂಪಾಡಿ, ಪಕ್ಷಿಕೆರೆ ಸಮಿಪದ ಸುರಗಿರಿ, ಕಿನ್ನಿಗೋಳಿ ಐಕಳ , ತೋಕೂರು, ಪಾವಂಜೆ, ಅರಂದ್ , ಕೊಳುವೈಲು ಪ್ರದೇಶದಲ್ಲಿ ಎಕರೆಗಟ್ಟಲೆ ಕೃಷಿ ಹಾನಿಯಾಗಿದ್ದು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮುಲ್ಕಿ ಬಿಲ್ಲವ ಸಂಘದ ಬಳಿಯ ನಾರಾಯಣಗುರು ಆಂಗ್ಲ ಮಾಧ್ಯಮ ಪ್ರಾ. ಶಾಲೆ ಆವರಣ ಗೋಡೆ ಕುಸಿದು ಸ್ಥಳೀಯ ದೇವರಾಯ ಅವರ ಮನೆಗೆ ಹಾಗೂ ಚರಂತಿಪೇಟೆಯ ಬಾಲಚಂದ್ರ ಎಂಬವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಲ್ಕಿ ಹೋಬಳಿಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಆಡಳಿತ ಸನ್ನದ್ಧವಾಗಿದೆ ಎಂದು ವಿಶೇಷ ತಹಸೀಲ್ದಾರ್ ಮಾಣಿಕ್ಯ ಎನ್. ಹಾಗೂ ಮುಲ್ಕಿ ನ.ಪಂ. ಮುಖ್ಯಾಧಿಕಾರಿ ಚಂದ್ರಪೂಜಾರಿ ಹೇಳಿದ್ದಾರೆ. ಭಾನುವಾರ ಜಲಾವೃತವಾದ ಮಟ್ಟು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ನೆರೆ ಪೀಡಿತರನ್ನು ರಕ್ಷಿಸಿದ ಎಲ್ಲರಿಗೂ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಅತಿಕಾರಿಬೆಟ್ಟು ಗ್ರಾಪಂ ಪಿಡಿಒ ರವಿ, ಪಂ. ಮಾಜಿ ಉಪಾಧ್ಯಕ್ಷ ಕಿಶೋರ್ ಶೆಟ್ಟಿ, ಕೃಷಿಕ ದಯಾನಂದ ಮಟ್ಟು ಕೃತಜ್ಞತೆ ಸಲ್ಲಿಸಿದ್ದಾರೆ.
Kshetra Samachara
21/09/2020 03:18 pm