ಕುಂದಾಪುರ: ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆಯ 32ನೇಯ ವಾರ್ಷಿಕ ವೈಜ್ಞಾನಿಕ ಸಮ್ಮೇಳನವು ಸೆ. 10, 11ರಂದು ಕುಂದಾಪುರದ ಯುವ ಮೆರಿಡಿಯನ್ ಬೇ ರಿಸಾರ್ಟ್ ಮತ್ತು ಸ್ಪಾದಲ್ಲಿ ನಡೆಯಲಿದೆ ಎಂದು ಸಮ್ಮೇಳನಾಧ್ಯಕ್ಷ, ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ಹೇಳಿದರು.
ಅವರು ಬುಧವಾರ ಕುಂದಾಪುರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಉಡುಪಿ ಮತ್ತು ಮಂಗಳೂರಿನ ಮನೋವೈದ್ಯಕೀಯ ಸಂಘಗಳು ಜಂಟಿಯಾಗಿ ಆಯೋಜಿಸಿರುವ ಈ ಸಮ್ಮೇಳನವು "ಸಮುದಾಯಕ್ಕೆ ಮಾನಸಿಕ ಆರೋಗ್ಯ ಮಾಹಿತಿ ಲಭ್ಯತೆಯ ಕುಂದು ಕೊರತೆಗಳು" ಎಂಬ ವಿಷಯದ ಕೇಂದ್ರಿತವಾಗಿರುತ್ತದೆ. ಈ ಬಗ್ಗೆ ಸಮುದಾಯಕ್ಕೆ ದೊರಕುತ್ತಿರುವ ಮತ್ತು ದೊರಕದಿರುವ ಸೇವೆಗಳ ಬಗ್ಗೆ ಚರ್ಚಿಸಲಾಗುವುದು. ತಜ್ಞರು ಸಂಬಂಧಿತ ಕಾನೂನು ಮಾಹಿತಿಗಳನ್ನು ನೀಡಲಿದ್ದಾರೆ ಎಂದು ಡಾ. ಪ್ರಕಾಶ್ ತೋಳಾರ್ ಹೇಳಿದರು.
ಸಚಿವ ಡಾ. ಅಶ್ವಥ್ ನಾರಾಯಣ್ ಸಿ. ಎನ್., ಹಿಂದುಳಿದ ವರ್ಗಗಳ ಅಭಿವೃದ್ಧಿ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ನಾಡೋಜ ಡಾ. ಜಿ. ಶಂಕರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಕಿರಣ್ ಕುಮಾರ್ ಪಿ. ಕೆ. ವಹಿಸುವರು.
ಸಮ್ಮೇಳನದ ಪೂರ್ವಭಾವಿಯಾಗಿ ಸೆ.9ರಂದು ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ ಉಡುಪಿಯ ಐ ಎಂ ಎ ಸಭಾಂಗಣದಲ್ಲಿ ಜಿಲ್ಲೆಯ ಪತ್ರಕರ್ತರಿಗೆ "ಆತ್ಮಹತ್ಯೆಯನ್ನು ಅರ್ಥೈಸಿಕೊಳ್ಳುವುದು" ಎಂಬ ವಿಷಯ ಮತ್ತು ಮಧ್ಯಾಹ್ನ ಕೋಟೇಶ್ವರದ ಯುವ ಮೆರಿಡಿಯನ್ ರೆಸಾರ್ಟ್ ನಲ್ಲಿ ಜಿಲ್ಲೆಯ ಸರ್ಕಾರಿ ವೈದ್ಯರಿಗೆ ಮತ್ತು ಐಎಂಎ ಕುಂದಾಪುರದ ವೈದ್ಯರುಗಳಿಗೆ "ಮಾನಸಿಕ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವುದು" ವಿಷಯದಲ್ಲಿ ಕಾರ್ಯಾಗಾರ ನಡೆಯಲಿದೆ.
ಮನೋರೋಗಿಗಳು ಮತ್ತು ಮನೋವೈದ್ಯರನ್ನು ಅಸ್ಪೃಷ್ಯರಂತೆ ಸಮಾಜ ಕಾಣುತ್ತಿದೆ. ಆಧುನಿಕ ಜೀವನ ಶೈಲಿಯೇ ಆತ್ಮಹತ್ಯಾ ಪ್ರಕರಣಗಳಿಗೆ ಕಾರಣ. ಈ ಎಲ್ಲ ಅಂಶಗಳ ಬಗ್ಗೆ ಸಮ್ಮೇಳನದಲ್ಲಿ ಸಂವಾದ ನಡೆಯಲಿದೆ ಎಂದು ಮನೋವೈದ್ಯ ಡಾ. ಕೆ. ಎಸ್. ಕಾರಂತ್ ಹೇಳಿದರು.
ಮನೋರೋಗಿಗಳು ಆಸ್ಪತ್ರೆಗಳಿಗೇ ಬರಬೇಕೆಂದಿಲ್ಲ. ಮನೋವೈದ್ಯರೇ ಸಮುದಾಯದತ್ತ ತೆರಳಿ ಸೂಕ್ತ ಮಾಹಿತಿ, ಚಿಕಿತ್ಸೆ ಒದಗಿಸುವ ಸಾಧ್ಯತೆಗಳ ಬಗ್ಗೆ ಸಮ್ಮೇಳನದಲ್ಲಿ ವಿಶ್ಲೇಷಿಸಲಾಗುವುದು ಎಂದು ಮನೋವೈದ್ಯೆ ಡಾ. ಮಹಿಮಾ ಆಚಾರ್ಯ ಹೇಳಿದರು.
ಸಮ್ಮೇಳನ ಸಮಿತಿ ಕಾರ್ಯದರ್ಶಿ, ಮಣಿಪಾಲ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಸಹಪ್ರಾಧ್ಯಾಪಕ ಡಾ. ರವೀಂದ್ರ ಮುನೋಳಿ ಇದ್ದರು.
Kshetra Samachara
07/09/2022 10:44 pm