ಮಂಗಳೂರು: ಆಪತ್ತಿನಲ್ಲಿರುವ ಮೂಕ ಪ್ರಾಣಿಗಳ ರಕ್ಷಣೆಗೆ ಓಡೋಡಿ ಧಾವಿಸುವ ಮಂಗಳೂರಿನ ಪ್ರಾಣಿಪ್ರಿಯೆ ರಜನಿ ಶೆಟ್ಟಿ ಅವರು ನಗರದ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ನಾಲ್ಕನೇ ಮಹಡಿಗೆ ಹಗ್ಗದ ಸಹಾಯದಿಂದ ಇಳಿದು ಸಾಹಸ ಮೆರೆದು ಬೆಕ್ಕೊಂದನ್ನು ರಕ್ಷಿಸಿದ್ದಾರೆ.
ಕೊಡಿಯಾಲ್‌ಗುತ್ತುವಿನ ಎಂಪಾಯರ್ ಮಾಲ್ ಹಿಂಭಾಗದ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಬಿದ್ದ ಪರ್ಷಿಯನ್ ತಳಿಯ ಬೆಕ್ಕೊಂದು ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ ಸಿಲುಕಿಕೊಂಡಿತ್ತು. ಬೆಕ್ಕಿನ ಪೋಷಕರು ಬೆಳಗಿನ ಹೊತ್ತು ಎಲ್ಲರೂ ಕೆಲಸಕ್ಕೆ ಹೋದ ಸಮಯದಲ್ಲಿ. ಬೆಕ್ಕು ಮನೆಯಿಂದ ಹೊರಗಡೆ ಬಂದು ಆಕಸ್ಮಿಕವಾಗಿ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದಿದೆ. ಬಿದ್ದ ಪರಿಣಾಮವಾಗಿ ಬೆಕ್ಕು ಹೊರ ಬರಲು ಪರದಾಟ ನಡೆಸಿದೆ.
ರಾತ್ರಿ ಮನೆಯವರು ಬಂದು ನೋಡಿದಾಗಲೇ ಬೆಕ್ಕು ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ ಸಿಲುಕಿಕೊಂಡಿರುವುದು ತಿಳಿದು ಬಂದಿದೆ. ತಕ್ಷಣ ಮನೆಯವರು ರಜನಿ ಶೆಟ್ಟಿ ಅವರನ್ನು ಸಂಪರ್ಕಿಸಿದ್ದಾರೆ. ಮರುದಿನ ಬೆಳಗ್ಗೆ ಅವರು ಅಲ್ಲಿಗೆ ಹೋಗಿದ್ದಾರೆ. ಆದರೆ ಬಾಲ್ಕನಿಯಿಂದ ಬೆಕ್ಕನ್ನು ರಕ್ಷಿಸುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ರಜನಿ ಶೆಟ್ಟಿ ಅವರು ಏಳನೇ ಮಹಡಿಯಿಂದ ಸೊಂಟಕ್ಕೆ ಹಗ್ಗವನ್ನು ಕಟ್ಟಿ ನಾಲ್ಕನೇ ಮಹಡಿಯ ಗ್ಯಾಲರಿಗೆ ಇಳಿದು ಹರಸಾಹಸಪಟ್ಟು ಬೆಕ್ಕನ್ನು ರಕ್ಷಿಸಿ ಮನೆಯವರಿಗೆ ಒಪ್ಪಿಸಿದ್ದಾರೆ. ರಜನಿ ಶೆಟ್ಟಿ ಅವರು ಈ ಹಿಂದೆಯೂ ಬಾವಿಗೆ ಬಿದ್ದಿರುವ, ತೊಂದರೆಗೆ ಸಿಲುಕಿರುವ ನಾಯಿ, ಬೆಕ್ಕು ಸೇರಿದಂತೆ ಇನ್ನಿತರ ಮೂಕ ಪ್ರಾಣಿಗಳನ್ನು ರಕ್ಷಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
PublicNext
13/06/2022 06:36 pm