ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ವೈಕುಂಠ ಬಾಳಿಗ ಕಾನೂನು ಮಹಾ ವಿದ್ಯಾಲಯ, ಜಿಲ್ಲಾ ವಕೀಲರ ಸಂಘ, ಉಳ್ಳೂರು ಗ್ರಾಮ ಪಂಚಾಯತ್‌ಗಳ ಆಶ್ರಯದಲ್ಲಿ ಉಳ್ಳೂರಿನ ಜಾತಬೆಟ್ಟು ಚಿತ್ತಾರಿ ಮಹಾಬಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇಂದು ಕಾನೂನು ಅರಿವು ಮತ್ತು ನೆರವು ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವನ್ನು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ,ನಮ್ಮ ದೇಶದಲ್ಲಿ ಇಂದು ಭ್ರಷ್ಟಚಾರವು ಕ್ಯಾನ್ಸರ್‌ಗಿಂತ ದೊಡ್ಡ ಪಿಡುಗು ಆಗಿದ್ದು, ನಿಯಂತ್ರಿಸಲು ಸಾಧ್ಯ ಇಲ್ಲದಷ್ಟು ಪ್ರಮಾಣದಲ್ಲಿ ಬೆಳೆದು ನಿಂತಿದೆ. ಸಾರ್ವಜನಿಕ ಸೇವೆಯ ಉದ್ದೇಶದಿಂದ ಉತ್ತಮ ಅಂಕ ಗಳಿಸಿ ಸರಕಾರಿ ಉನ್ನತ ಹುದ್ದೆಗೆ ಬರುವ ಕೆಲವು ಅಧಿಕಾರಿಗಳು, ಸಿಬಂದಿ ಭ್ರಷ್ಟಚಾರದ ಮೂಲಕ ನೈತಿಕತೆ, ಮಾನವೀಯತೆ ಕಳೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಜನರ ಕಂದಾಯ, ಪಿಂಚಣಿ, ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಗ್ರಾಮಸ್ಥರು ನ್ಯಾಯಮೂರ್ತಿಗೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಈ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಪರಿಶೀಲನೆಗೆ ಸೂಚಿಸಲಾಯಿತು. ಸ್ಥಳದಲ್ಲಿ ಆರೋಗ್ಯ ಇಲಾಖೆ ಮಳಿಗೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಪರೀಕ್ಷೆ ನಡೆಸಲಾಯಿತು. ಆಧಾರ್ ತಿದ್ದುಪಡಿಗೆ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಮಿಕ ಇಲಾಖೆ ವತಿಯಿಂದ ಈ ಶ್ರಮ್ ಕಾರ್ಡ್ ಮತ್ತು ಆಯುಷ್ಮಾನ್, ಆರೋಗ್ಯ ಭಾಗ್ಯ ಕಾರ್ಡ್‌ಗಳಿಗೆ ನೋಂದವಣೆ ಮಾಡಿಸಲಾಯಿತು. ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಮಳಿಗೆಗಳಲ್ಲಿ ಜನರಿಗೆ ವಿವಿಧ ಯೋಜನೆಗಳ ಬಗ್ಗೆ ಮತ್ತು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ಸೇವೆ ಪಡೆಯುವ ಬಗ್ಗೆ ಮಾಹಿತಿ ನೀಡಲಾಯಿತು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ಗುರುರಾಜನ್, ಜಿಲ್ಲಾಧಿಕಾರಿ ಕೂರ್ಮಾ ಎಂ.ರಾವ್, ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ,ಗ್ರಾಪಂ ಅಧ್ಯಕ್ಷ ಮಹೇಶ್ ಕೋಟ್ಯಾನ್, ಪ್ರಭಾರ ತಹಶೀಲ್ದಾರ್ ಪುರಂದರ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ವಹಿಸಿದ್ದರು.ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿರ್ಮಲಾ ಕುಮಾರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ವಂದಿಸಿದರು. ಕೌಟುಂಬಿಕ ನ್ಯಾಯಲಯದ ಶಿರಸ್ತೆದಾರ್ ನಟರಾಜ್ ಹಾಗೂ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
Kshetra Samachara
10/09/2022 09:12 pm