ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಾಜೆ ಎಂಬಲ್ಲಿ ಶಾಲೆಯ ಹತ್ತಿರ ತಳ್ಳುಗಾಡಿ ಕ್ಯಾಂಟೀನ್ ಒಂದನ್ನು ಗ್ರಾಮ ಪಂಚಾಯಿತಿ ದೂರಿನ ಆಧಾರದಲ್ಲಿ ನೋಟಿಸ್ ನೀಡಿ, ಬಳಿಕ ತೆರವು ಮಾಡಿದ ಘಟನೆ ನಡೆದಿದೆ. ಇದಾದ ನಂತರ ಮಾಲೀಕನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ರಾಮಕೃಷ್ಣ ಕಾಮತ್ ಎಂಬವರು ಮಂಚಿ ಕುಕ್ಕಾಜೆ ಶಾಲೆ ಸಮೀಪ ತಳ್ಳುಗಾಡಿಯಲ್ಲಿ ಸಂಜೆ ವೇಳೆ ಕ್ಯಾಂಟೀನ್ ನಿರ್ವಹಿಸಿಕೊಂಡು ಬರುತ್ತಿದ್ದು, ಇದೀಗ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ.
ಈ ಕುರಿತು ಗ್ರಾ.ಪಂ ಪಿಡಿಒ ಅವರು ಪ್ರತಿಕ್ರಿಯೆ ನೀಡಿ, ಶಾಲೆಯ ಹತ್ತಿರದಿಂದ ಬೇರೆ ಕಡೆಗೆ ಸ್ಥಳಾಂತರಿಸುವಂತೆ ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಪಂ ನಲ್ಲಿ ಅದನ್ನು ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿತ್ತು. ಮೂರು ಬಾರಿ ಸೂಚನಾಪತ್ರ ನೀಡಿದರೂ ತೆರವು ಮಾಡದ ಹಿನ್ನೆಲೆಯಲ್ಲಿ ಪೊಲೀಸ್ ನೆರವಿನೊಂದಿಗೆ ತಳ್ಳುಗಾಡಿಯನ್ನು ತೆರವುಗೊಳಿಸಿ ಪಂಚಾಯಿತಿ ಕಚೇರಿ ಆವರಣಕ್ಕೆ ತಂದು ನಿಲ್ಲಿಸಲಾಯಿತು. ವಿಷಯ ತಿಳಿದ ತಳ್ಳುಗಾಡಿ ಮಾಲೀಕ ಕಾಮತ್ ಅವರು ಪಂಚಾಯಿತಿಗೆ ಆಗಮಿಸಿ ಅದನ್ನು ದಂಡ ಕಟ್ಟಿ ಬಿಡಿಸಿಕೊಂಡು ಹೋಗಲೆಂದು ಬಂದಿದ್ದ ವೇಳೆ ಅಧ್ಯಕ್ಷರ ಅನುಮತಿ ಪಡೆಯಬೇಕು ಎಂದು ಸೂಚಿಸಿದಾಗ ಅವರು ಅಲ್ಲಿಂದ ತೆರಳಿದ್ದಾರೆ ಎಂದು ಹೇಳಿದರು.
ಕಾಮತ್ ಕೆಲ ವರ್ಷಗಳಿಂದ ಸಂಜೆ ವೇಳೆ ತಳ್ಳುಗಾಡಿಯಲ್ಲಿ ಕ್ಯಾಂಟೀನ್ ನಡೆಸಿಕೊಂಡು ಬರುತ್ತಿದ್ದರು. ಅವರೀಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿಬಂದಿದ್ದು, ಬಡ ಕ್ಯಾಂಟೀನ್ ನಿರ್ವಾಹಕನ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಆಪಾದಿಸಲಾಗಿದೆ.
Kshetra Samachara
27/08/2022 05:04 pm