ಮುಲ್ಕಿ: ಕಿನ್ನಿಗೋಳಿ ಸಮೀಪದ ಬಳ್ಕುಂಜೆ, ಉಳೆಪಾಡಿ, ಕೊಲ್ಲೂರು ಗ್ರಾಮಗಳ ಸುಮಾರು 1091 ಎಕರೆ ಕೈಗಾರಿಕೆಗಳ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಪರ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಗೌರವ ಹೆಗ್ಡೆ ಮಾತನಾಡಿ, ಯಾವುದೇ ಕಾರಣಕ್ಕೂ ಪರಿಸರಕ್ಕೆ ಹಾನಿಕಾರಕವಾದ ಅಮೋನಿಯಂ ಹಾಗೂ ಕೆಮಿಕಲ್ ಕೈಗಾರಿಕಾ ನಿರ್ಮಾಣಕ್ಕೆ ಅವಕಾಶವಿಲ್ಲ. ಕೈಗಾರಿಕೆ ಸ್ಥಾಪಿಸಲು ಅದರದ್ದೇ ಆದ ಕಾನೂನು ಇದ್ದು ಹಸುರೀಕರಣ ಮುಖ್ಯ, ಕೈಗಾರಿಕೆ ಬಂದರೆ ಗ್ರಾಮಗಳು ಮಾತ್ರವಲ್ಲ ಸುತ್ತಲಿನ ನಗರ ಪ್ರದೇಶಗಳು ಕೂಡ ಅಭಿವೃದ್ಧಿಯಾಗುತ್ತದೆ ಎಂದರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಮಾತನಾಡಿ ಊರಿನ ಅಭಿವೃದ್ಧಿ ಮುಖ್ಯವಾಗಿದ್ದು ಯಾವುದೇ ಕುಟುಂಬಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಕೃಷಿ ಭೂಮಿಯೊಂದಿಗೆ ಕೈಗಾರಿಕೆ ಅವಶ್ಯ ವಾಗಿದ್ದು ವದಂತಿಗಳನ್ನು ನಂಬಬೇಡಿ ಎಂದರು .
ಸಮಿತಿಯ ಕರ್ನೀರೆ ವಿಶ್ವನಾಥ ಶೆಟ್ಟಿ ಮಾತನಾಡಿ ಬಳ್ಕುಂಜೆಯಲ್ಲಿ ಶೇ.100, ಕೊಲ್ಲೂರು ಶೇಕಡ 85 ಉಳೆಪಾಡಿ ಶೇಕಡಾ 80 ಗ್ರಾಮಸ್ಥರು ಕೈಗಾರಿಕೆಗಳಿಗೆ ಭೂಮಿ ಕೊಡಲು ಸಿದ್ಧರಿದ್ದಾರೆ. ನಿರ್ವಸಿತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವುದು, ಅಲ್ಲದೆ ಭೂಮಿಗೆ ಸರಿಯಾದ ಬೆಲೆ ಕೊಡಬೇಕು, ಅಭಿವೃದ್ಧಿಗೆ ಕೈಗಾರಿಕೆಗಳು ಅನಿವಾರ್ಯ ಎಂದರು.
ಗ್ರಾಮಸ್ಥರಾದ ಮಾರ್ಕ್ ಮಾರ್ಟಿಸ್ ಕೊಲ್ಲೂರು ಮಾತನಾಡಿ ಸರಕಾರ ಕೈಗಾರಿಕೆಗಳ ಮೂಲಕ ಗ್ರಾಮದ ಅಭಿವೃದ್ಧಿಗೆ ಬೆಂಬಲ ನೀಡುತ್ತಿದ್ದು ವಿರೋಧ ಸರಿಯಲ್ಲ ಎಂದರು. ಗ್ರಾಮಸ್ಥ ಅಶೋಕ್ ಶೆಟ್ಟಿ ಮಾತನಾಡಿ ಗ್ರಾಮದಲ್ಲಿ ಕೈಗಾರಿಕೆಗಳಿಂದ ಪರ ವಿರೋಧ ಹೇಳಿಕೆಗಳು ನಡೆಯುತ್ತಿದ್ದು, ಸಮಾಲೋಚನೆ ಮೂಲಕ ಸಂದೇಹವನ್ನು ಬಗೆಹರಿಸಿಕೊಳ್ಳೋಣ ಅಭಿವೃದ್ಧಿಯಲ್ಲಿ ರಾಜಕೀಯ ಬೇಡ ಎಂದರು. ಮತ್ತಿತರರು ಉಪಸ್ಥಿತರಿದ್ದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
Kshetra Samachara
16/08/2022 06:34 pm