ಮುಲ್ಕಿ: ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಲು ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ವರ್ತಕರ ಹಾಗೂ ಬೀದಿ ವ್ಯಾಪಾರಿಗಳ ಸಭೆ ನ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಪ್ಲಾಸ್ಟಿಕ್ ನಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತಿವೆ. ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ವರ್ತಕರು ಹಾಗೂ ಜನತೆ ಸ್ವಯಂ ಪ್ರೇರಿತರಾಗಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಪಣ ತೊಡಬೇಕು. ಪ್ಲಾಸ್ಟಿಕ್ ನಿಷೇಧ ಒಕ್ಕೊರಲ ಧ್ವನಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ ಸಭೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ ಆ.10ರಿಂದ ಕಡ್ಡಾಯವಾಗಿ ನಗರ ಪಂಚಾಯತಿ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿಯಾಗುತ್ತಿದೆ. ಒಂದು ವೇಳೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಬಳಸಿದರೆ ಮೊದಲಿಗೆ 2,000 ರೂ.ದಂಡ, ಎರಡನೇ ಬಾರಿ 5,000 ರೂ., ಮೂರನೇ ಬಾರಿ 10,000 ರೂ. ದಂಡ ವಿಧಿಸಲಾಗುವುದು. ಪುನರಾವರ್ತಿಸಿದರೆ ಜಿಲ್ಲಾಡಳಿತದ ಸೂಚನೆಯಂತೆ ಅಂಗಡಿ ಪರವಾನಿಗೆ ರದ್ದುಪಡಿಸಲಾಗುವುದು ಎಂದರು.
ಗ್ರಾಹಕರ ಪರವಾಗಿ ನ.ಪಂ ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ ಮೊದಲು ಪ್ಲಾಸ್ಟಿಕ್ ಉತ್ಪಾದಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಬಡ ಅಂಗಡಿ ಮಾಲೀಕರ ಹಾಗೂ ಗ್ರಾಹಕರ ಮೇಲೆ ದಂಡ ವಿಧಿಸುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅಂಗಡಿ ಮಾಲೀಕರಾದ ರಾಮಕೃಷ್ಣ ಕವತ್ತಾರು ಪ್ರಾಣೇಶ್ ಹೆಜ್ಮಾಡಿ, ತಾರಾನಾಥ್ ಸುವರ್ಣ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ಸತೀಶ್ ಅಂಚನ್, ಆರೋಗ್ಯಾಧಿಕಾರಿ ಲಿಲ್ಲಿ ನಾಯರ್ ಮತ್ತಿತರರು ಉಪಸ್ಥಿತರಿದ್ರು.
Kshetra Samachara
05/08/2022 03:40 pm