ಮುಲ್ಕಿ: ಕಿನ್ನಿಗೋಳಿ ಸಮೀಪದ ಬಳ್ಕುಂಜೆ, ಉಳಿಪಾಡಿ ಕೊಲ್ಲೂರು ಪ್ರದೇಶದ ಸುಮಾರು 1093 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕೃಷಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಮಾಹಿತಿ ಕಲೆ ಹಾಕಲು ಸಮಾನ ಮನಸ್ಕರ ಹಾಗೂ ಹೋರಾಟಗಾರರ ನಿಯೋಗ ಭೇಟಿ ಕೊಟ್ಟಿತು.
ಭೂಸ್ವಾಧೀನ ವಿರೋಧಿಸುತ್ತಿರುವ ಗ್ರಾಮದ ಹೋರಾಟಗಾರರ ಜೊತೆಗೆ ಗ್ರಾಮದಲ್ಲಿ ಸುತ್ತಾಡುತ್ತಿದ್ದಾಗ ಗ್ರಾಮದ ಮನೆ, ಜಮೀನುಗಳಿಗೆ ಭೇಟಿ ನೀಡಿ ಅಕ್ರಮವಾಗಿ ಸರ್ವೇ ಮಾಡುತ್ತಿದ್ದ ತಂಡವೊಂದು ಎದುರಾಯಿತು.
2008ರಲ್ಲಿ ನಿವೃತ್ತರಾಗಿರುವ ಉಪ ತಹಶೀಲ್ದಾರ್ ಚಂದ್ರ ಮೋಹನ್ ನೇತೃತ್ವದ ತಂಡ ಸುರತ್ಕಲ್‌ನ ಖಾಸಗಿ ವ್ಯಕ್ತಿ ಸಂತೋಷ್ ಕುಮಾರ್‌ರ ಪರವಾಗಿ ಸರ್ವೇ ಕೆಲಸ ಮಾಡುತ್ತಿರುವುದು ತಿಳಿಯಿತು. ವಿಚಾರಿಸಿದಾಗ, "ಕೆಐಡಿಬಿಯವರ ಬಳಿ ಸಿಬ್ಬಂದಿ ಕೊರತೆ ಇರುವುದರಿಂದ ಭೂಸ್ವಾಧೀನಾಧಿಕಾರಿ ಬಿನೋಯ್ ಅವರು ಸಮೀಕ್ಷೆ ನಡೆಸುವ ಗುತ್ತಿಗೆಯನ್ನು ಖಾಸಗಿ ಏಜನ್ಸಿ ಹೊಂದಿರುವ ಸುರತ್ಕಲ್‌ನ ಸಂತೋಷ್ ಅವರಿಗೆ ನೀಡಿರುತ್ತಾರೆ" ಎಂದು ತಿಳಿದು ಬಂತು.
ಈ ರೀತಿ ಸಮೀಕ್ಷೆ ನಡೆಸಲು, ನೀವು ಬರೆದದ್ದಕ್ಕೆ ಜನರ ಸಹಿ ಪಡೆಯಲು ನಿಮಗೆ ಗುತ್ತಿಗೆ ನೀಡಿರುವುದರ ಆದೇಶ ಪ್ರತಿ, ಅದಕ್ಕಾಗಿ ಕೆಐಡಿಬಿ ಅಥವಾ ಜಿಲ್ಲಾಡಳಿತ ನಿಮಗೆ ನೀಡಿರುವ ಗುರುತು ಚೀಟಿ ತೋರಿಸಿ ಅಂದಾಗ, ಅದ್ಯಾವುದು ನಮಗೆ ನೀಡಲಾಗಿಲ್ಲ ಎಂದು ತಿಳಿಸಿದರು.
ಈ ರೀತಿ ಖಾಸಗಿ ವ್ಯಕ್ತಿಗಳು ಸರಕಾರದ ಆದೇಶ, ಗುರುತು ಚೀಟಿ ಇಲ್ಲದೆ ಗ್ರಾಮ ಪಂಚಾಯತ್ ಪರವಾಗಿ ಇಲ್ಲದೆ ಊರೊಳಗಡೆ ಬಂದು ಮನೆ, ಜಮೀನಿನ ಮಾಹಿತಿ ಸಂಗ್ರಹಿಸುವುದು, ಫೋಟೋ, ಸಹಿ ಪಡೆಯವುದು ಅಕ್ರಮವಾಗಿದೆ ಎಂದು ಅವರನ್ನು ವಾಪಸ್ ಕಳಿಸಿದ ಘಟನೆ ನಡೆಯಿತು.
ಈ ಸಂದರ್ಭ ಜಿಲ್ಲಾಡಳಿತ ಭೂಸ್ವಾಧೀನಕ್ಕೆ ಸಂಬಂಧಿಸಿ ತಪ್ಪು ದಾರಿ ಅನುಸುರಿಸುತ್ತಿರುವುದನ್ನು ಖಂಡಿಸಲಾಯಿತು. ನಿಯೋಗದಲ್ಲಿ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ, ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ, ಅಶ್ವಿನಿ ಹೆಗ್ಡೆ, ರೈತ ಸಂಘದ ಕೆ ಯಾದವ ಶೆಟ್ಟಿ, ಡಿವೈಎಫ್ಐ ನ ನಿತಿನ್ ಬಂಗೇರ, ಶ್ರೀನಾಥ್ ಕುಲಾಲ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಆನಂದ್, ಭೂಸ್ವಾಧೀನ ವಿರೋಧಿ ಸಮಿತಿಯ ಮುಖಂಡರು ಹಾಜರಿದ್ದರು.
Kshetra Samachara
01/07/2022 10:57 pm