ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ಹೆಚ್ಚಿನ ಬೃಹತ್ ಕೈಗಾರಿಕೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ನೆಲೆ ಕಂಡಿವೆ. ಆದರೆ, ಈ ಕೈಗಾರಿಕೆಗಳ ಸ್ಥಾಪನೆಗೆ ಈ ಭಾಗದ ಜನತೆ ತಮ್ಮ ನೆಲೆಯನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಇಲ್ಲಿನ ಜನ ಕಂಟಕದಿಂದ ಪಾರಾದಂತಿಲ್ಲ.
ಇದೀಗ ಕೈಗಾರಿಕಾ ವಲಯವೊಂದರ ಸ್ಥಾಪನೆಗಾಗಿ ಜಿಲ್ಲೆಯ 3 ಗ್ರಾಮಗಳ ಜನತೆ ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 1091 ಎಕರೆಯಷ್ಟು ಜನವಸತಿ ಪ್ರದೇಶ, ಕೃಷಿ ಭೂಮಿ ಕೈಗಾರಿಕಾ ವಲಯದಡಿ ಸಮಾಧಿಯಾಗಲಿದೆ!
ಹೌದು... ದ.ಕ. ಜಿಲ್ಲೆಯ ಕಿನ್ನಿಗೋಳಿ ಬಳಿಯ ಉಳೆಪಾಡಿ, ಬಳ್ಕುಂಜೆ, ಕೊಲ್ಲೂರು ಈ 3 ಗ್ರಾಮಗಳು ಕೈಗಾರಿಕಾ ವಲಯ ಸ್ಥಾಪನೆಗೆ ಆಪೋಶನವಾಗಲಿದೆ. ಮಾರ್ಚ್ 21ರಂದು ಈ ಬಗ್ಗೆ ವರದಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಆದರೆ, ಎಂಎಲ್ಎ, ಗ್ರಾಪಂಗಳಿಗೂ ಈ ಮಾಹಿತಿ ಗೊತ್ತಿರಲಿಲ್ಲ. ಇದೀಗ ವಾರದಿಂದ ಈ ಗ್ರಾಮಗಳ ಮನೆಮನೆಗೂ ಕೆಐಎಡಿಬಿ ನೋಟಿಸ್ ನೀಡುತ್ತಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಈ 3 ಗ್ರಾಮಗಳು ಯಥೇಚ್ಛ ನೀರು, ಕೃಷಿ ಭೂಮಿ ಇರುವ ಪ್ರದೇಶ. ಕೃಷಿ, ಹೈನುಗಾರಿಕೆಯೇ ಜೀವನಾಧಾರ. ತೆಂಗು, ಅಡಿಕೆ, ಬಾಳೆ, ಕರಿಮೆಣಸು, ಭತ್ತ, ಕಬ್ಬು, ಉದ್ದು, ಹೆಸರು, ಎಳ್ಳು, ಹಣ್ಣು ಬೆಳೆದು ಸ್ವಾವಲಂಬಿಯಾಗಿ ಬದುಕುತ್ತಿರುವವರು. ಇದೀಗ ಈ ಗ್ರಾಮಗಳ ಸಾವಿರಾರು ಕುಟುಂಬಗಳು ತಮ್ಮ ಆಸ್ತಿ-ಪಾಸ್ತಿ, ಕೃಷಿ ಭೂಮಿ ಬಿಟ್ಟು ಹೋಗಬೇಕಾಗಿದೆ.
ದೈವಸ್ಥಾನ, ದೇವಸ್ಥಾನ, ಮಸೀದಿ, ಚರ್ಚ್ ಕೈಗಾರಿಕಾ ವಲಯ ನಿರ್ಮಾಣದಡಿ ನಾಶವಾಗುವ ಭೀತಿಯಲ್ಲಿದೆ. ಕಾರಣಿಕ ಪುರುಷರಾದ ಕಾಂತಾಬಾರೆ-ಬೂದಬಾರೆಯರ ಜನ್ಮಸ್ಥಾನಕ್ಕೆ ಸಂಬಂಧಪಟ್ಟ ಭೂಮಿ, ತುಳುನಾಡಿನ ಮೂಲ ನಿವಾಸಿಗಳಾದ ಕೊರಗ ಸಮುದಾಯ, ಇನ್ನಿತರ ದಲಿತರೂ ಈ ಕೈಗಾರಿಕಾ ವಲಯದಿಂದ ಸಂತ್ರಸ್ತರಾಗಲಿದ್ದಾರೆ.
ವಿಷಾದವೆಂದರೆ ಕರಾವಳಿಯಲ್ಲಿ ಅತೀ ಹೆಚ್ಚು ಕೃಷಿ ಭೂಮಿ ಹೊಂದಿರುವ ಕೊರಗ ಸಮಾಜದ 11 ಎಕರೆ ಕೃಷಿ ಭೂಮಿ, 42 ದೈವಗಳಿರುವ ದೈವಸ್ಥಾನಗಳು ಕಣ್ಮರೆಯಾಗಲಿದೆ. ಏನೇ ಆದರೂ ತಾವು ಯಾರೂ ಈ ಜಾಗ ಬಿಟ್ಟು ಕದಲುವುದಿಲ್ಲ. ಕಷ್ಟಪಟ್ಟು ಬೆಳೆಸಿದ ಕೃಷಿ, ಫಸಲಿಗಾಗುವ ಹೊತ್ತಿಗೆ ಬಿಟ್ಟು ಹೋಗಿ ಎಂದು ಹೇಳಿದರೆ ನಾವು ಎಲ್ಲಿಗೆ ಹೋಗಲಿ? ನಮಗೆ ಪರಿಹಾರ ಬೇಡ, ನಮ್ಮ ಭೂಮಿಯನ್ನು ನಮಗೇ ಬಿಟ್ಟುಕೊಡಿ ಎಂದು ಹನಿಗಣ್ಣಾಗುತ್ತಾರೆ ಗ್ರಾಮಸ್ಥರು. ಒಟ್ಟಿನಲ್ಲಿ ಸರಕಾರ ಈ ಅಹವಾಲಿಗೆ ಕಿವಿಯಾಗಿ, ಸಕಾರಾತ್ಮಕವಾಗಿ ಸ್ಪಂದಿಸಬೇಕು.
PublicNext
09/06/2022 09:36 pm