ಮಂಗಳೂರು: ದೇವಾಲಯ ಶೈಲಿಯ ಕಟ್ಟಡ ಪತ್ತೆಯಾಗಿರುವ ನಗರದ ಮಳಲಿ ಜುಮ್ಮಾ ಮಸೀದಿಯ ಸುತ್ತಮುತ್ತಲಿನ 500 ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶಿಸಿದ್ದಾರೆ.
ಮಸೀದಿ ಪುನರ್ನಿರ್ಮಾಣ ಮಾಡುತ್ತಿದ್ದ ಸಂದರ್ಭ ದೇವಾಲಯ ಶೈಲಿಯ ಕಟ್ಟಡ ಪತ್ತೆ ಹಿನ್ನೆಲೆಯಲ್ಲಿ ಪೂರ್ವಪರ ತಿಳಿದುಕೊಳ್ಳಲು ಹಿಂದೂ ಸಂಘಟನೆಗಳು ಅಲ್ಲಿನ ತೆಂಕುಳಿಪಾಡಿ ಗ್ರಾಮದ ಜೋಡುತಡಮೆ ಬಳಿಯ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ನಾಳೆ ಬೆಳಗ್ಗೆ ತಾಂಬೂಲ ಪ್ರಶ್ನೆ ಇಟ್ಟಿದ್ದಾರೆ. ಪರಿಣಾಮ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಸೀದಿಯ ಸುತ್ತಮುತ್ತಲಿನ 500 ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಮೇ 24ರ ರಾತ್ರಿ 8ರಿಂದಲೇ ಸೆಕ್ಷನ್ ಜಾರಿಯಾಗಿದ್ದು, ಮೇ 26ರ ಬೆಳಗ್ಗೆ 8ರವರೆಗೆ ಮುಂದುವರಿಯಲಿದೆ.
ಆದ್ದರಿಂದ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಳಲಿ ಜುಮ್ಮಾ ಸುತ್ತಮುತ್ತಲಿನ 500 ಮೀ. ವ್ಯಾಪ್ತಿಯ ಕಾಚಿಲಕೋಡಿಯಿಂದ ಮಳಲಿ ಕಡೆಗೆ ಬರುವ ರಸ್ತೆ ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ ಹಾಗೂ ಕೈಕಂಬ ಕಡೆಯಿಂದ ಜೋಡುತಡಮೆ ರಸ್ತೆಯವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಶಸ್ತ್ರಗಳು, ಮಾರಕಾಯುಧಗಳನ್ನು ಹಿಡಿದು ತಿರುಗಾಡುವಂತಿಲ್ಲ. ಪಟಾಕಿ ಮುಂತಾದ ಕ್ಷಾರಕ ಸ್ಫೋಟಕಗಳನ್ನು ಸಿಡಿಸುವಂತಿಲ್ಲ. ಯಾವುದೇ ವ್ಯಕ್ತಿಗಳ ಪ್ರತಿಕೃತಿಯನ್ನು ಪ್ರದರ್ಶಿಸುವಂತಿಲ್ಲ. ಸರಕಾರಿ ಸಂಸ್ಥೆಗಳು, ಅಧಿಕಾರಿಗಳ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ ಎಂದು ಪೊಲೀಸ್ ಕಮಿಷನರ್ ಅವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Kshetra Samachara
24/05/2022 10:32 pm