ಉಡುಪಿ: ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಲೋಕೋಪಯೋಗಿ ರಸ್ತೆ, ಜಿಲ್ಲಾ ಪಂಚಾಯತ್ ರಸ್ತೆ, ಗ್ರಾಮೀಣ ರಸ್ತೆಗಳು ಸೇರಿದಂತೆ ಯಾವುದೇ ರಸ್ತೆಯಲ್ಲಿ ಮಳೆಯ ನೀರು ನಿಲ್ಲದೇ, ಸರಾಗವಾಗಿ ಹರಿದುಹೋಗುವಂತೆ ರಸ್ತೆ ಪಕ್ಕದ ಚರಂಡಿಗಳನ್ನು ಸ್ವಚ್ಛಗೊಳಿಸಿ, ಯಾವುದೇ ಅನಾಹುತಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಾನ್ಸೂನ್ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಳೆ ಸಂದರ್ಭದಲ್ಲಿ ಕುಂದಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಬರುತ್ತಿದ್ದು, ರಸ್ತೆ ನಿರ್ಮಾಣ ಸಂದರ್ಭದಲ್ಲಿ ರೂಪಿಸಿದ್ದ ಯೋಜನೆಯಂತೆ ಮಳೆ ನೀರು ಹರಿಯಲು ಅಗತ್ಯ ವ್ಯವಸ್ಥೆ ಮಾಡಬೇಕು. ಅವೈಜ್ಞಾನಿಕವಾಗಿ ಮಾಡಿರುವ ಕಾಮಗಾರಿಗಳನ್ನು ತೆರವುಗೊಳಿಸಬೇಕು ಎಂದರು.
ಈ ಸ್ಥಳಗಳಿಗೆ ಕುಂದಾಪುರ ತಹಶೀಲ್ದಾರ್, ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಯಾವುದೇ ಭಾಗದಲ್ಲಿ ಮಳೆಯಿಂದ ಅವಘಡಗಳು ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, 2 ದಿನದಲ್ಲಿ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
Kshetra Samachara
24/05/2022 11:39 am