ಪುತ್ತೂರು:ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮಾರ್ಚ್ 12 ರಂದು ರಾಜ್ಯಾದ್ಯಂತ ಮೆಗಾ ಲೋಕ ಅದಾಲತ್‌ಗಳು ನಡೆಯಲಿದ್ದು, ಸಾವಿರಾರು ಪ್ರಕರಣಗಳು ರಾಜಿ ಮೂಲಕ ಏಕ ಕಾಲದಲ್ಲಿ ಇತ್ಯರ್ಥಗೊಳ್ಳಲಿವೆ.
ಈ ಬಾರಿ ಲೋಕ ಅದಾಲತ್‌ನಲ್ಲಿ ಕಕ್ಷಿದಾರರು ನೇರವಾಗಿ ಕಲಾಪದಲ್ಲಿ ಭಾಗವಹಿಸಬೇಕಾಗಿಲ್ಲ. ಆನ್‌ಲೈನ್ (ವರ್ಚುವಲ್) ಮೂಲಕ ಭಾಗವಹಿಸಲು ಹಿಂದಿಗಿಂತಲೂ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದು ಪುತ್ತೂರಿನ ಪ್ರಧಾನ ಹಿರಿಯ ವ್ಯಾವಹಾರಿಕ ನ್ಯಾಯಾಧೀಶರು, ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಯವರೂ, ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ರಮೇಶ್ ಎಂ. ಹೇಳಿದರು.
ಈ ಹಿಂದಿನ ಲೋಕ ಅದಾಲತ್‌ಗಳಲ್ಲಿ ವರ್ಚುವಲ್ ಕಲಾಪಕ್ಕೆ ಅವಕಾಶ ನೀಡಲಾಗಿತ್ತಾದರೂ ಈ ಬಾರಿಯಷ್ಟು ವ್ಯಾಪಕವಾಗಿರಲಿಲ್ಲ. ಈ ಬಾರಿ ವಾಟ್ಸ್ಆಪ್ ನಂಬರ್ ಇದ್ದರೆ ಸಾಕು, ಕಕ್ಷಿದಾರರಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಲಾಗುತ್ತದೆ. ಈ ಮೂಲಕ ಕಲಾಪ ನಿರ್ವಹಿಸಿ ರಾಜಿ ಮಾಡಿಸಲಾಗುತ್ತದೆ ಎಂದು ವಿವರಿಸಿದರು.
ಕಳೆದ 2021 ರ ಡಿಸೆಂಬರ್ 18ರಂದು ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಪುತ್ತೂರಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವೂ 599 ಸೇರಿದಂತೆ ಇಲ್ಲಿನ ಆರು ನ್ಯಾಯಾಲಯ ವ್ಯಾಪ್ತಿಯಲ್ಲಿ ಒಟ್ಟು ಪ್ರಕರಣಗಳನ್ನು ರಾಜಿಯಲ್ಲಿ ಮುಗಿಸಲಾಗಿತ್ತು. ಈ ಮೂಲಕ ಕಕ್ಷಿದಾರರಿಗೆ 2,83,21,621 ರೂಪಾಯಿಗಳನ್ನು ಮರಳಿಸಲಾಗಿತ್ತು. ಈ ಬಾರಿ ಇಲ್ಲಿಯವರೆಗೆ 707 ಪ್ರಕರಣಗಳು ನೋಂದಣಿಯಾಗಿವೆ. ಇದರಲ್ಲಿ ಶೇಕಡ 98 ರಷ್ಟು ರಾಜಿಯಾಗುವ ನಿರೀಕ್ಷೆ ಇದೆ.
Kshetra Samachara
24/02/2022 01:02 pm