ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಧಾರ್ಮಿಕ ಕ್ಷೇತ್ರಗಳ ಸುರಕ್ಷತೆಯ ಸಭೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ನಡೆಯಿತು.ಸಭೆಯಲ್ಲಿ ಮುಲ್ಕಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಕುಸುಮಾಧರ ಮಾತನಾಡಿ ಸರಕಾರದ ನಿಯಮಗಳ ಪ್ರಕಾರ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಯೊಂದು ಧಾರ್ಮಿಕ ಕ್ಷೇತ್ರದಲ್ಲಿ ಸುಸಜ್ಜಿತ ಸಿಸಿ ಕ್ಯಾಮೆರಾವನ್ನು ಅಳವಡಿಸಬೇಕು ಎಂಬ ನಿಯಮಗಳಿದ್ದು ಪಾಲಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಂಡ ವಿಧಿಸಲಾಗುವುದು.
ದೇವ/ ದೈವಸ್ಥಾನದ, ಮಸೀದಿ ಚರ್ಚ್ ಗಳ ಕಾಣಿಕೆ ಡಬ್ಬಿ ಸಹಿತ ನಗ-ನಗದನ್ನು ಸೇಫ್ ಲಾಕರ್ ನಲ್ಲಿ ಇಡುವ ಮೂಲಕ ಸುರಕ್ಷತೆಯನ್ನು ಕಾಪಾಡಬೇಕು.
ನಾಗಬನ ಸಹಿತ ಅನೇಕ ಕಾರಣಿಕ ಕ್ಷೇತ್ರಗಳ ಬಗ್ಗೆ ಪರಿಶೀಲಿಸಲು ಸೂಕ್ತ ಸಿಬ್ಬಂದಿ ನೇಮಿಸಬೇಕು . ಧಾರ್ಮಿಕ ಕ್ಷೇತ್ರಗಳಿಗೆ ಬರುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಗಮನಹರಿಸಬೇಕು ಇದರಿಂದ ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದು ಎಂದರು.
ಸಭೆಯಲ್ಲಿ ಗುತ್ತಕಾಡು ಶಾಂತಿನಗರದಲ್ಲಿ ರಾತ್ರಿಹೊತ್ತು ಬೀಟ್ ವ್ಯವಸ್ಥೆ ಕಲ್ಪಿಸಬೇಕು, ಕೆಮ್ರಾಲ್ ಹೈಸ್ಕೂಲು, ಕೊಯಿಕುಡೆ ಪಂಜ ಬಳಿ ಕಿಡಿಗೇಡಿಗಳು ಮದ್ಯ, ಗಾಂಜಾ ಸೇವಿಸಿ ದಾಂದಲೆ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂತು.
ಸಾಮಾಜಿಕ ಕಾರ್ಯಕರ್ತ ಸಾಹುಲ್ ಹಮೀದ್ ಕದಿಕೆ ಮಾತನಾಡಿ ಕೇವಲ ಕಳ್ಳತನ ನಡೆದಾಗ ಮಾತ್ರ ನಾಗರಿಕರ ಸಭೆ ನಡೆಸುವುದಲ್ಲ, ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಿದರೆ ಉತ್ತಮ ಎಂದರು.
ಇನ್ಸ್ಪೆಕ್ಟರ್ ಕುಸುಮಾಧರ ಉತ್ತರಿಸಿ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಮಾರಾಟದ ವಿರುದ್ಧ ನಾಗರಿಕರು ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವ ವಿರುದ್ಧ ಸೈಬರ್ ಕ್ರೈಂ ಪ್ರಕರಣ ದಾಖಲಿಸಲಾಗುವುದು ಎಂದರು.
ಸಭೆಯಲ್ಲಿ ವಿವಿಧ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರಾದ ಚಂದ್ರಶೇಖರ, ಸಂತಾನ್ ಡಿಸೋಜಾ ಕಿನ್ನಿಗೋಳಿ, ಟಿಎಚ್ ಮಯದಿ ಗುತ್ತಕಾಡು, ಲಿಯಾಕತ್ ಆಲಿ ಮಾತನಾಡಿದರು.ಮುಲ್ಕಿ ಠಾಣಾ ಎಸ್ಐ ಚಂದ್ರಶೇಖರ್, ಕೃಷ್ಣಪ್ಪ, ಸಂಜೀವ ಮತ್ತಿತರರು ಉಪಸ್ಥಿತರಿದ್ದು ಉತ್ತರಿಸಿದರು
Kshetra Samachara
20/11/2021 04:16 pm