ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಸಣ್ಣಪುಟ್ಟ ಕಳ್ಳತನ ನಡೆಯುತ್ತಿದ್ದು ಈ ಬಗ್ಗೆ ಮುಲ್ಕಿ ನಾಗರಿಕರು ಹಾಗೂ ಪೊಲೀಸ್ ಸಿಬ್ಬಂದಿಗಳ ಸಭೆ ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಕುಸುಮಾಧರ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಇನ್ಸ್ಪೆಕ್ಟರ್ ಕುಸುಮಾಧರ ಮಾತನಾಡಿ ಠಾಣಾ ವ್ಯಾಪ್ತಿಯಲ್ಲಿ ಅನೇಕ ಸಣ್ಣಪುಟ್ಟ ಕಳ್ಳತನಗಳು ನಡೆದಿದ್ದು ಮಂಗಳೂರು ಪೊಲೀಸ್ ಕಮಿಷನರ್ ಆದೇಶದಂತೆ ನಾಗರಿಕರ ಸಭೆಯನ್ನು ಕರೆಯಲಾಗಿದೆ.
ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಾಗರಿಕರು ಗಮನಹರಿಸಬೇಕು. ಕಳ್ಳರನ್ನು ಪತ್ತೆ ಹಚ್ಚಲು ನಾಗರಿಕರ ಸಹಕಾರ ಅಗತ್ಯ. ಸಮಾಜದಲ್ಲಿ ವಿವಿಧ ರೀತಿಯಲ್ಲಿ ಮೋಸ ಮಾಡುವ ವ್ಯಕ್ತಿ ಗಳಿದ್ದು ನಾಗರಿಕರು ಜಾಗೃತರಾಗಿರಬೇಕು.
ಹಳೆಯಂಗಡಿ ಮಠ ಸಹಿತ ಮುಲ್ಕಿ ಆಸುಪಾಸಿನಲ್ಲಿ ನಡೆದ ಕಳ್ಳತನದ ಬಗ್ಗೆ ಈಗಾಗಲೇ ತನಿಖೆ ಮುಂದುವರಿಯುತ್ತಿದ್ದು ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದರು.
ಮುಲ್ಕಿ ನಪಂ ಸದಸ್ಯ ಪುತ್ತುಬಾವ ಮಾತನಾಡಿ ಪೊಲೀಸರು ಸಾರ್ವಜನಿಕರ ಸೇವೆಯನ್ನು ಬಳಸಿಕೊಳ್ಳಬೇಕು. ಗ್ರಾಮ ಗ್ರಾಮಗಳಲ್ಲಿ ಬೀಟ್ ಪೊಲೀಸ್ ವ್ಯವಸ್ಥೆ ಬಲಪಡಿಸಬೇಕು ಎಂದರು.
ನ. ಪಂ ಸದಸ್ಯ ಬಾಲಚಂದ್ರ ಕಾಮತ್ ಮಾತನಾಡಿ ಠಾಣಾ ವ್ಯಾಪ್ತಿಯ ಗಡಿ ಪ್ರದೇಶವಾದ ಕಡವಿನ ಬಾಗಿಲು ಬಳಿ ಅನುಮಾನಾಸ್ಪದ ವ್ಯಕ್ತಿಗಳು ಶಾಂಭವಿ ನದಿಗೆ ಗಾಳ ಹಾಕಲು ಬರುತ್ತಿದ್ದು ಪರಿಶೀಲಿಸಲು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ಉಷಾ ಮಾತನಾಡಿ ಈ ಪರಿಸರದಲ್ಲಿ ದಾರಿದೀಪದ ವ್ಯವಸ್ಥೆ ಕಾಡುತ್ತಿದ್ದು ಕಳ್ಳತನ ಸಹಿತ ಅಕ್ರಮ ಚಟುವಟಿಕೆಗಳಿಗೆ ಸಹಕಾರಿಯಾಗುತ್ತಿದೆ ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ ಮಾತನಾಡಿ ಹೊರರಾಜ್ಯದ ಕಾರ್ಮಿಕರ ಹಾಗೂ ಬಸ್ಸು ನಿಲ್ದಾಣದ ಬಳಿ ತಿರುಗಾಡುತ್ತಿರುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರು ಗಮನಹರಿಸಬೇಕು ಹಾಗೂ ಬಸ್ಸುನಿಲ್ದಾಣ ಸಹಿತ ಅನೇಕ ಪ್ರಾಮುಖ್ಯವಿರುವ ಕಡೆಗಳಲ್ಲಿ ಸುಸಜ್ಜಿತ ಸಿಸಿ ಕ್ಯಾಮೆರಾ ಅಳವಡಿಸಲು ಉದ್ಯಮಿಗಳು ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ನಾಗರಿಕ ಸಮಿತಿಯ ವೆಂಕಟೇಶ ಹೆಬ್ಬಾರ್, ನ.ಪಂ. ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯ ಯೋಗೀಶ್ ಕೋಟ್ಯಾನ್,ಮಾಜೀ ಸದಸ್ಯ ಉಮೇಶ್ ಮಾನಂಪಾಡಿ, ಉದಯ ಶೆಟ್ಟಿ ಅಧಿಧನ್, ಶಿವಶಂಕರ ವರ್ಮ ಮತ್ತಿತರರು ಉಪಸ್ಥಿತರಿದ್ದರು
Kshetra Samachara
17/11/2021 06:19 pm