ಮಂಗಳೂರು: ಇಂಟರ್ನ್ ಶಿಪ್ ಗೆಂದು ಕಚೇರಿಗೆ ಬಂದಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ನನ್ನು ಕರ್ನಾಟಕ ರಾಜ್ಯ ಬಾರ್ ಅಸೋಸಿಯೇಶನ್ (ಕೆಎಸ್‌ಬಿಸಿ) ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ನ್ಯಾಯಾಲಯದಲ್ಲಿ ವಕೀಲಿಕೆ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ.
ನಗರದ ಮಹಿಳಾ ಠಾಣೆಯಲ್ಲಿ ರಾಜೇಶ್ ಭಟ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದೀಗ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಕೆ.ಎಸ್.ಎನ್.ರಾಜೇಶ್ ಭಟ್ ನನ್ನು ಬಾರ್ ಕೌನ್ಸಿಲ್ ಸಮಿತಿ ಅಮಾನತುಗೊಳಿಸಿದೆ. ರಾಜೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನ್ಯಾಯವಾದಿಗಳ ಕಾಯ್ದೆಯ 35ನೇ ಸೆಕ್ಷನ್ ಅಡಿಯಲ್ಲಿ ಮುಂದಿನ ಆದೇಶದವರೆಗೆ ಈ ಅಮಾನತು ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಲ್ಲದೆ, ರಾಜೇಶ್ ಭಟ್ ಗೆ ಎಸಿಬಿ ಎಸ್‌ಪಿಪಿಯಾಗಿ ಕಾರ್ಯನಿರ್ವಹಿಸದಿರಲು ಎಸಿಬಿ ಪೊಲೀಸ್ ಅಧೀಕ್ಷಕರಿಂದ ಸೂಚನಾ ಪತ್ರ ನೀಡಲಾಗಿದೆ. ಈ ಮೂಲಕ ದ.ಕ. ಜಿಲ್ಲಾ ಎಸಿಬಿ ಪ್ರಕರಣಗಳಲ್ಲಿ ಅಭಿಯೋಜನೆ ಮಾಡದಂತೆ ಸೂಚನೆ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸಿಬಿ ಎಸ್ಪಿಪಿ ಆಗಿ ನಿಯೋಜನೆಗೊಂಡಿದ್ದ ರಾಜೇಶ್ ಭಟ್ಗೆ ಕಾರ್ಯ ನಿರ್ವಹಿಸದಿರಲು ಸೂಚಿಸಲಾಗಿದೆ.
Kshetra Samachara
22/10/2021 08:53 pm