ಮಂಗಳೂರು: ಅಕ್ರಮ ಗಡಿಪ್ರವೇಶದ ಆರೋಪದ ಮೇಲೆ ಮಂಗಳೂರು ಪೊಲೀಸರಿಂದ ಬಂಧಿಸಿಲ್ಪಟ್ಟ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಮಂಗಳೂರು ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.
ಈ ಶ್ರೀಲಂಕಾ ಪ್ರಜೆಗಳು ಅಕ್ರಮವಾಗಿ ಭಾರತದ ಗಡಿಯನ್ನು ದಾಟಿ ತಮಿಳುನಾಡು ಮೂಲಕ ಮಂಗಳೂರಿಗೆ ಆಗಮಿಸಿ ಇಲ್ಲಿಂದ ಕೆನಡಾಗೆ ತೆರಳುವ ಉದ್ದೇಶ ಹೊಂದಿದ್ದರೆಂದು ತಿಳಿದು ಬಂದಿತ್ತು. ವಿಚಾರಣೆ ವೇಳೆ ಇವರುಗಳು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದು ದೃಢಪಟ್ಟಿದೆ. ಈ ಬಗ್ಗೆ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ಮಂಗಳೂರು ಜೈಲಿನಲ್ಲಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು.
ಮಂಗಳೂರಿನಲ್ಲಿ ಬಂಧಿತರಾಗಿದ್ದ ಈ 38 ಮಂದಿ ಶ್ರೀಲಂಕಾ ಪ್ರಜೆಗಳ ಪೈಕಿ ಓರ್ವನಿಗೆ ಶ್ರೀಲಂಕಾದ ನಿಷೇಧಿತ ಸಂಘಟನೆ ಎಲ್‌ಟಿಟಿಇ ಜೊತೆ ನಂಟು ಹೊಂದಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿತ್ತು. ಎಲ್‌ಟಿಟಿಇಗೆ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಬಂಧಿತ ವ್ಯಕ್ತಿಯೊಬ್ಬ ಇರುವುದು ಗೊತ್ತಾಗಿದೆ. ಈತನಿಗೆ ತಮಿಳುನಾಡಿನಲ್ಲಿ ಬಂಧಿತ ಎಲ್‌ಟಿಟಿಇ ಬೆಂಬಲಿಗ ದಿನಕರನ್ ಜೊತೆ ಸಂಪರ್ಕ ಇತ್ತು ಎನ್ನಲಾಗಿದೆ. ಮಂಗಳೂರಿನಂತೆ ಬೆಂಗಳೂರಿನಲ್ಲೂ ಶ್ರೀಲಂಕಾ ಪ್ರಜೆಗಳನ್ನು ಬಂಧಿಸಲಾಗಿತ್ತು. ರಾಷ್ಟ್ರೀಯ ಭದ್ರತೆಯ ವಿಚಾರ ಇದಾಗಿರುವುದರಿಂದ ಬೆಂಗಳೂರಿನಲ್ಲೇ ವಿಸ್ತೃತ ತನಿಖೆ ನಡೆಸಲು ಎನ್‌ಐಎ ನಿರ್ಧರಿಸಿದೆ. ಹೀಗಾಗಿ ಶ್ರೀಲಂಕಾ ಪ್ರಜೆಗಳನ್ನು ಮಂಗಳೂರಿನಿಂದ ಬೆಂಗಳೂರಿನ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
Kshetra Samachara
05/08/2021 09:40 pm