ಉಡುಪಿ: ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭ ದೇಶದ ರಾಜಧಾನಿಯಲ್ಲಿ ನಮ್ಮ ಸೈನ್ಯದ ಶಸ್ತ್ರಾಸ್ತ್ರಗಳ, ಸೈನಿಕರ ಪರಾಕ್ರಮಗಳ ಪ್ರದರ್ಶನ ನೋಡಿದ್ದೇವೆ. ಹಾಗೆಯೇ ದಕ್ಷಿಣದ ಅರಬ್ಬಿ ಸಮುದ್ರದಲ್ಲಿ ರೋಚಕ ಕಸರತ್ತಿನ ನೋಟ ಕಂಡುಬಂತು. ಹೌದು, ಕರಾವಳಿ ಕಾಯೋ ಪೊಲೀಸರು ಮೂರು ಬೋಟ್ ಗಳಲ್ಲಿ ಗಸ್ತು ತಿರುಗಿ ತಮ್ಮ ಸಾಹಸಮಯ ತಪಾಸಣೆ ಕಾರ್ಯ ನಿರ್ವಹಣೆ ಅನಾವರಣಗೊಳಿಸಿದರು. ಈ ರೋಚಕ ಕಡಲ ಸಾಹಸದ ಝಲಕ್ ಇಲ್ಲಿದೆ...
ಉಡುಪಿಯ ಮಲ್ಪೆ ಕಡಲ ತೀರದಿಂದ ಎಂಟು ಕಿಲೋಮೀಟರ್ ನಷ್ಟು ದೂರದ ಆಳ ಸಮುದ್ರದಲ್ಲಿ ಕಂಡುಬಂದ ದೃಶ್ಯವಿದು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಕಾವಲು ಪೊಲೀಸ್ ಬೆಟಾಲಿಯನ್ ಗೆ ಕೇಂದ್ರಸ್ಥಾನ ಇರುವುದು ಉಡುಪಿಯಲ್ಲಿ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಿಎಸ್ ಪಿ ತನ್ನ ರೋಮಾಂಚಕ ಕಾರ್ಯ ಚಟುವಟಿಕೆ ಪ್ರದರ್ಶನ ನಡೆಸಿತು.
ಮೀನುಗಾರಿಕೆ ಬೋಟ್ ಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲನೆ, ಸಮುದ್ರದಲ್ಲಾಗುವ ಘಟನಾವಳಿಯ ಮಾಹಿತಿ ಕಲೆ ಹಾಕಲಾಯಿತು.
"ಸಮುದ್ರ ತೀರದಿಂದ 12 ನಾಟಿಕಲ್ ವ್ಯಾಪ್ತಿ ಕರಾವಳಿ ಕಾವಲು ಪೊಲೀಸರ ಸುಪರ್ದಿಯಲ್ಲಿರುವ ಪ್ರದೇಶ. ನಂತರ ಕೋಸ್ಟ್ ಗಾರ್ಡ್, ಇಂಡಿಯನ್ ನೇವಿ ದೇಶದ ರಕ್ಷಣೆ ಮಾಡುತ್ತದೆ. ಜೊತೆಗೆ ಕಾನೂನು ಬಾಹಿರ ಚಟುವಟಿಕೆಗಳಾದ ಮದ್ಯ, ಗಾಂಜಾ ಸಾಗಾಟವನ್ನೂ ತಡೆಯಬೇಕಾಗಿದೆ. ಅವಧಿ ಮುಗಿದ, ಪಾಸ್ ಪೋರ್ಟ್ ಇಲ್ಲದೆ ಪ್ರಯಾಣಿಸುವ ವಿದೇಶಿಯರ ತಪಾಸಣೆ ಜವಾಬ್ದಾರಿ ಕರಾವಳಿ ಕಾವಲು ಪೊಲೀಸರ ಮೇಲಿದೆ. ಕಡಲಿನಲ್ಲಿ ರಾತ್ರಿ-ಹಗಲು ಕಸುಬು ಮಾಡುವ ಮೀನುಗಾರರನ್ನು ಕರಾವಳಿ ಕಾವಲು ಪೊಲೀಸ್ ವಿಶ್ವಾಸಕ್ಕೆ ಪಡೆದಿದ್ದಾರೆ. ಕಡಲ ತೀರದಲ್ಲಿ ನೆಲೆಸಿರುವ ಸುಮಾರು 200 ಮಂದಿ ಮೀನುಗಾರರ ಕುಟುಂಬ ಪೊಲೀಸರ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಅನುಮಾನಾಸ್ಪದ ದೋಣಿಗಳು, ಸಂಶಯಾಸ್ಪದ ವ್ಯಕ್ತಿಗಳು ಕಾಣಿಸಿಕೊಂಡಲ್ಲಿ ತಕ್ಷಣ ಕೇಂದ್ರ ಸ್ಥಾನಕ್ಕೆ ಕರೆ ಬರುತ್ತದೆ. ಕರೆ ಬಂದ ತಕ್ಷಣ ಕರಾವಳಿ ಕಾವಲು ಪೊಲೀಸರ ಗಸ್ತು ಬೋಟ್ ಕಡಲಿಗಿಳಿಯುತ್ತದೆ".
"ಮಳೆಗಾಲ, ಚಂಡಮಾರುತ- ವಾಯುಭಾರ ಕುಸಿತ ಸಂದರ್ಭ ಸಮುದ್ರದಲ್ಲಿ ಸಾಕಷ್ಟು ಅವಘಡಗಳು ನಡೆಯುತ್ತದೆ. ಈ ಸಂದರ್ಭ ಮೀನುಗಾರರ ರಕ್ಷಣೆಗೆ ಬೇಕಾದ ಸುಸಜ್ಜಿತ ದೊಡ್ಡ ಗಾತ್ರದ ಸ್ಪೀಡ್ ಬೋಟ್ ಗಳು ಕರಾವಳಿ ಕಾವಲು ಪೊಲೀಸರ ಬಳಿ ಇಲ್ಲ. ಅನಾಹುತ ಆದಾಗ ಸಮುದ್ರದಲ್ಲಿ ಚಿಕಿತ್ಸೆ ಕೊಡುವ ಆಂಬ್ಯುಲೆನ್ಸ್ ಬಗ್ಗೆಯೂ ಬೇಡಿಕೆಯಿದೆ. ಖಾಲಿ ಇರುವ ಸುಮಾರು 200 ಹುದ್ದೆಗಳನ್ನು ಭರ್ತಿ ಮಾಡಿದಲ್ಲಿ ಸಮುದ್ರ ಮುಖೇನ ನಡೆಯಬಹುದಾದ ಸಂಭಾವ್ಯ ಅನಾಹುತ ತಪ್ಪಿಸಲು ಕೋಸ್ಟಲ್ ಪೊಲೀಸರಿಗೆ ಇನ್ನಷ್ಟು ಶಕ್ತಿ ಸಿಗಲಿದೆ" ಎಂಬುದು ಕೋಸ್ಟ್ ಗಾರ್ಡ್ ಎಸ್ಪಿ ಚೇತನ್ ಅವರ ಮಾತು.
-ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
05/02/2021 11:20 am