ಪುತ್ತೂರು: ಜೈನ ಧರ್ಮದವರು ಆರಾಧಿಸುವ ಬಾಹುಬಲಿ ಭಗವಾನರ ಬಗ್ಗೆ ಅಶ್ಲೀಲವಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಮೈಸೂರಿನ ನ್ಯೂ ಕಾಂಗ್ರೆಸ್ ಪಕ್ಷದ ರಾಷ್ಟ್ರಯ ಅಧ್ಯಕ್ಷ ಅಯೂಬ್ ಖಾನ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭಾರತೀಯ ಜೈನ್ ಮಿಲನ್ ಪುತ್ತೂರು ಇದರ ನಿಯೋಗ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಡಿಷನಲ್ ಎಸ್‌ಪಿ ಕುಮಾರಚಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಟಿವಿ ಚಾನಲ್‌ನ ಪೇಜ್‌ನಲ್ಲಿ ಉಡುಪಿಯ ಹಿಜಾಬ್ ಗಲಾಟೆಯ ಸಂದರ್ಶನ ನೀಡುವ ಸಂದರ್ಭದಲ್ಲಿ ಜೈನ ಧರ್ಮದವರು ಆರಾಧಿಸುವ ಬಾಹುಬಲಿ ಭಗವಾನರ ಬಗ್ಗೆ ಅಯೂಬ್ ಖಾನ್ ಅವರು ನೀಡಿದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಯೂಬ್‌ಖಾನ್ ಅವರು ಉದ್ದೇಶ ಪೂರ್ವಕವಾಗಿ ಜೈನ ಧರ್ಮದ ಧಾರ್ಮಿಕ ಭಾವನೆಗಳಿಗೆ ಮತ್ತು ನಂಬಿಕೆಗಳಿಗೆ ಧಕ್ಕೆಯನ್ನು ಉಂಟು ಮಾಡಿರುವುದಲ್ಲದೆ ಸಮಾಜದ ನಡುವೆ ಐಕ್ಯತೆ ಸಾಮರಸ್ಯ ಧಾರ್ಮಿಕ ಪರಂಪರೆಗಳ ನಡುವೆ ಸಾಮಾಜಿಕ ಅಸಮತೋಲನ ದ್ವೇಷ, ಭಾವನೆ, ಸಂಘರ್ಷ ಮತ್ತು ಶಾಂತಿ ಭಂಗವಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆರೋಪಿಯು ಜೈನ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ, ಉಂಟು ಮಾಡಿರುವ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 153(ಎ), (ಬಿ), 295(ಎ), 298, 506 ಮತ್ತು 76 ಐಟಿ ಕಾಯ್ದೆಯ ಅಡಿಯಲ್ಲಿ ಕಾನೂನು ಪ್ರಕಾರ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಭಾರತೀಯ ಜೈನ್ ಮಿಲನ್ ಪುತ್ತೂರು ಇದರ ಕಾರ್ಯದರ್ಶಿ ಸತೀಶ್ ಪಡಿವಾಳ್ ಅವರು ದೂರು ನೀಡಿದ್ದು, ನಿಯೋಗದಲ್ಲಿ ಜೈನ್ ಮಿಲನ್ ಅಧ್ಯಕ್ಷ ರಾಜಶೇಖರ್ ಜೈನ್, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ರಕ್ಷಿತ್ ಜೈನ್, ಸುದರ್ಶನ್ ಜೈನ್, ಡಾ. ಅಶೋಕ್ ಪಡಿವಾಳ್, ನವೀನ್ ಪಡಿವಾಳ್, ರಂಜಿತ್ ಮಲ್ಲ, ಯಶೋದರ ಜೈನ್, ನರೇಶ್ ಜೈನ್ ಉಪಸ್ಥಿತರಿದ್ದರು.
Kshetra Samachara
11/02/2022 07:44 am