ಮುಲ್ಕಿ: ಮುಲ್ಕಿ ನ.ಪಂ. ವತಿಯಿಂದ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೊರೋನಾ ಮುಂಜಾಗರೂಕತೆ ವಹಿಸಲು ನಗರವಾಸಿಗಳಿಗೆ, ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದೆ. ಶುಕ್ರವಾರ ಬೆಳಗ್ಗಿನಿಂದಲೇ ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ, ಅಂಗಡಿ ಮಾಲೀಕರ ಬಳಿ ಕೊರೊನಾ ನಿಯಮ ಪಾಲಿಸಲು ಸೂಚನೆ ನೀಡಿದ್ದು, ನಿಯಮ ಪಾಲಿಸದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಈ ಬಗ್ಗೆ ಮುಲ್ಕಿ ನ.ಪಂ. ಮುಖ್ಯಾಧಿಕಾರಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್ 19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವನ್ನು ಸರಕಾರ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿ, ನಿರ್ದೇಶನಗಳನ್ನು ಕಾರ್ನಾಡ್ ಮತ್ತು ಮುಲ್ಕಿ ನಪಂ ವ್ಯಾಪ್ತಿಯಲ್ಲಿ ನೀಡಲಾಯಿತು ಎಂದರು.
ಪಂ. ವ್ಯಾಪ್ತಿಯಲ್ಲಿ ಪ್ರತಿ ನಾಗರಿಕರು ಮಾಸ್ಕ್ ಹಾಕುವಂತೆ ಸೂಚಿಸಲಾಗಿದ್ದು, ಅಂಗಡಿ ಮಾಲೀಕರು, ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಚೌಕ ಹಾಕುವ ಮೂಲಕ ನಿರ್ದೇಶನ ನೀಡಬೇಕು. ಕೋವಿಡ್ ನಿಯಮಗಳನ್ನು ಪಾಲಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಲ್ಕಿ ನ.ಪಂ. ಆರೋಗ್ಯಾಧಿಕಾರಿ ಲಿಲ್ಲಿ ನಾಯರ್ ಹೇಳಿದರು.
ಬಳಿಕ ಮುಖ್ಯಾಧಿಕಾರಿ ನೇತೃತ್ವದಲ್ಲಿ ಮುಲ್ಕಿ ನ.ಪಂ ವ್ಯಾಪ್ತಿಯ ಕಾರ್ನಾಡು, ಮುಲ್ಕಿ ಬಸ್ಸುನಿಲ್ದಾಣದ ಪರಿಸರ, ಕೊಳಚಿಕಂಬಳ, ಚಿತ್ರಾಪು, ಕೆಎಸ್ ರಾವ್ ನಗರ ಪರಿಸರದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಮಾಸ್ಕ್ ಧರಿಸದವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ಮುಲ್ಕಿ ನ. ಪಂ ಸಿಬ್ಬಂದಿ ಪ್ರಕಾಶ್,ಕಿಶೋರ್, ಪ್ರದೀಪ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Kshetra Samachara
25/09/2020 05:25 pm