ಉಡುಪಿ: ಬೆಳ್ಳಾರೆಯಲ್ಲಿ ಹತ್ಯೆಯಾದ ಮಸೂದ್ ಮನೆಗೆ ಸಿಎಂ ಭೇಟಿ ನೀಡಿದ ವಿಚಾರವಾಗಿ ಮಾತನಾಡಿದ ಉಸ್ತುವಾರಿ ಸಚಿವ ಅಂಗಾರ, ನಾವು ತಾರತಮ್ಯ ಮಾಡಿಲ್ಲ. ಪ್ರವೀಣ್ ನೆಟ್ಟಾರು ಕೊಲೆಯಾಗಿದೆ. ಆದರೆ ಮಸೂದ್ ಕೊಲೆಯಾಗಿದ್ದು ಗಾಂಜಾ ಕಾರಣಕ್ಕೆ, ಅದು ಈ ರೀತಿಯ ಮರ್ಡರ್ ಅಲ್ಲ. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಎಂಬ ಭೇದಭಾವ ನಮಗೆ ಇಲ್ಲ ಎಂದು ಹೇಳಿದ್ದಾರೆ.
ಮಣಿಪಾಲದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವ, ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಈಗಾಗಲೇ ಇಬ್ಬರ ಬಂಧಿಸಲಾಗಿದೆ. ಮತ್ತಿಬ್ಬರನ್ನು ಪತ್ತೆ ಹಚ್ಚುವ ಕೆಲಸವನ್ನು ನಡೆಯುತ್ತಿದ್ದು, ಘಟನೆಯ ಬಳಿಕ ಸರಕಾರ ಕ್ಷಿಪ್ರವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿ 32 ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸಿಎಂ ಮಂಜೂರಾತಿ ನೀಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಪತ್ತೆಯಾದವರ ಬಗ್ಗೆ ನಂತರ ವಿವರ ನೀಡುತ್ತೇವೆ. ಕೇವಲ ಇಬ್ಬರಲ್ಲ ನಾಲ್ಕು ಜನರ ಪತ್ತೆ ಕಾರ್ಯ ನಡೆಯುತ್ತಿದೆ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರ ಆಕ್ರೋಶ ಸಹಜ ಎಂದ ಸಚಿವರು ಸಿಎಂ ಸ್ವತಃ ಬೆಳ್ಳಾರೆಗೆ ಬಂದಿದ್ದಾರೆ. ಈಗ ಕಾರ್ಯಕರ್ತರು ಸಮಾಧಾನಗೊಂಡಿದ್ದಾರೆ. ವಾಸ್ತವ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ಕೆಲವರು ರಾಜೀನಾಮೆ ಕೊಟ್ಟಿದ್ದಾರೆ, ಆದರೆ ಅದು ಪರಿಹಾರವಲ್ಲ, ಹಂತಕರಿಗೆ ಸರಿಯಾದ ಶಿಕ್ಷೆ ಕೊಡುವುದೇ ಪರಿಹಾರ ಎಂದು ಹೇಳಿದ್ದಾರೆ.
Kshetra Samachara
01/08/2022 07:01 pm