ಮಂಗಳೂರು: ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಮಂಗಳೂರಿನ ಬೀಚ್ ಗಳು ಇಂದು ಬಿಕೋ ಎನ್ನುತ್ತಿದೆ.
ವರ್ಷಂಪ್ರತಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿರುತ್ತಿದ್ದ ಬೀಚ್ ಗಳಿಗೆ ಈ ಬಾರಿ ರೂಪಾಂತರಿತ ಕೊರೊನಾ ಸೋಂಕಿನ ಭೀತಿಯಿಂದಾಗಿ ಪ್ರವಾಸಿಗರ ಪ್ರವೇಶ ನಿರಾಕರಿಸಲಾಗಿದೆ.
ಬ್ರಿಟನ್ ನಿಂದ ರಾಜ್ಯಕ್ಕೆ ಇತ್ತೀಚೆಗೆ ಆಗಮಿಸಿರುವ ಪ್ರಯಾಣಿಕರಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ವೈರಾಣು ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಕಡಲ ಕಿನಾರೆಗಳಿಗೆ ಹೊಸ ವರ್ಷಾಚರಣೆ ನಡೆಸಲು ನಿರ್ಬಂಧ ಹೇರಲಾಗಿದೆ.
ಆದ್ದರಿಂದ ಡಿಸೆಂಬರ್ 31ರ ಮಧ್ಯಾಹ್ನ 12 ರಿಂದ ಜನವರಿ 2 ರ ಮಧ್ಯಾಹ್ನ 12 ಗಂಟೆಯವರೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಪ್ರವೇಶಿಸುವುದನ್ನು ನಿರಾಕರಿಸಿ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ನಗರದ ಪಣಂಬೂರು ಬೀಚ್ ಸೇರಿದಂತೆ ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ಣ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್ ಬೀಚ್‍ಗಳಿಗೆ ಪ್ರವೇಶ ನಿರಾಕರಿಸಲಾಗಿದೆ.
ಬೀಚ್ ಗಿಂತ ಸುಮಾರು 200 ಮೀಟರ್ ದೂರದಲ್ಲಿಯೇ ಬ್ಯಾರಿಕೇಡ್ ಇರಿಸಿ ಪೊಲೀಸರು ಬೀಚ್ ಪ್ರೇಮಿಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ.
Kshetra Samachara
31/12/2020 06:40 pm