ಮಂಗಳೂರು: ಹಿಜಾಬ್ ವಿವಾದ ತಾರಕಕ್ಕೇರಿ ಕಾಲೇಜುಗಳಿಂದ ಡಿಬಾರ್ ಆದ ವಿದ್ಯಾರ್ಥಿನಿಯರು ಇದೀಗ ಸರಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಸುಮಾರು 16 ಶೇಕಡಾದಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಕರಾವಳಿಯ ವಿವಿಧ ಕಾಲೇಜುಗಳಿಂದ ಟಿಸಿ ಪಡೆದು ಹೊರ ಬಂದಿದ್ದಾರೆಂಬ ವಿಚಾರವು ಇದೀಗ ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ.
ಕಾಲೇಜು ಕ್ಯಾಂಪಸ್ ಗಳಲ್ಲಿ ಹಾಗೂ ತರಗತಿಯೊಳಗೆ ಹಿಜಾಬ್‌ಗೆ ಅವಕಾಶ ಕೋರುವ ವಿದ್ಯಾರ್ಥಿನಿಯರು ಟಿಸಿ ಪಡೆದು ತಮಗೆ ಬೇಕಾದ ಕಾಲೇಜಿಗೆ ಹೋಗಬಹುದೆಂದು ಇತ್ತೀಚೆಗೆ ಮಂಗಳೂರು ವಿವಿ ಕುಲಪತಿ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ವಿವಿಧ ಕಾಲೇಜುಗಳಿಂದ ಟಿಸಿ ಪಡೆಯುವ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರಿ ಕಾಲೇಜುಗಳ 34%, ಅನುದಾನಿತ ಕಾಲೇಜುಗಳ 13% ಸೇರಿದಂತೆ ಕರಾವಳಿ ಜಿಲ್ಲೆಯ ವಿವಿಧ ಕಾಲೇಜುಗಳ ಸುಮಾರು 16% ಮುಸ್ಲಿಂ ವಿದ್ಯಾರ್ಥಿನಿಯರು ವರ್ಗಾವಣೆ ಪತ್ರವನ್ನು ಪಡೆದಿದ್ದಾರೆ ಎಂಬ ಮಾಹಿತಿಯನ್ನು ಶಿಕ್ಷಣ ಇಲಾಖೆ ನೀಡಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಜಾಬ್‌ಗೆ ಅವಕಾಶ ಕೋರಿ ಹೋರಾಟ ಮಾಡಿದ್ದ ಮುಸ್ಲಿಂ ವಿದ್ಯಾರ್ಥಿನಿ ಗೌಸಿಯಾ, ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಿಂದ ಟಿಸಿ ಪಡೆಯಲು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರೇ ಕಾರಣ. ತರಗತಿ, ಕ್ಯಾಂಪಸ್‌ನಲ್ಲಿ ಹಿಜಾಬ್‌ಗೆ ಅವಕಾಶವಿಲ್ಲವೆಂದು ಟಿಸಿ ಪಡೆದಿದ್ದೇವೆ. ಸಂವಿಧಾನದ ಹಕ್ಕಿನನ್ವಯ ಶಿಕ್ಷಣ ಪಡೆಯಲು ಸಚಿವ ನಾಗೇಶ್ ಬಿಡಲಿಲ್ಲ. ತುಂಡು ಬಟ್ಟೆಗಾಗಿ ವಿವಾದ ಸೃಷ್ಟಿಸಿದ್ದು, ಇದು ಸರ್ಕಾರಕ್ಕೆ ನಷ್ಟವಾಗಿ ಪರಿಣಮಿಸಲಿದೆ. ಹಲವು ಸರ್ಕಾರಿ ಕಾಲೇಜುಗಳು ಮುಚ್ಚಲಿದೆ ಎಂದು ಹೇಳಿದ್ದಾರೆ.
PublicNext
22/08/2022 06:33 pm