ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿರುವ ಬಂದರಿನ 132 ವರ್ಷ ಹಳೆಯ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆ ನವೀಕರಣಗೊಂಡು ಹೊಸ ರೂಪ ಪಡೆದು ಸಾರ್ವಜನಿಕ ಸೇವೆಗೆ ಸಜ್ಜಾಗಿದೆ. ಬಂದರು ಠಾಣೆಯ ಕಟ್ಟಡ ಶತಮಾನದ ಇತಿಹಾಸ ಹೊಂದಿರುವ ಪುರಾತನ ಕಟ್ಟಡವಾಗಿದೆ.
ಈ ಪಾರಂಪರಿಕ ಕಟ್ಟಡವನ್ನು 2019 ರಿಂದ 2021 ರವರೆಗೆ ಅಧಿಕಾರದಲ್ಲಿದ್ದ ಅಂದಿನ ಇನ್ಸ್‌ಪೆಕ್ಟರ್ ಗೋವಿಂದ್ ರಾಜು ಅವರ ನೇತೃತ್ವದಲ್ಲಿ ನವೀಕರಿಸಲಾಗಿದೆ. ಠಾಣೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವುದನ್ನು ಗಮನಿಸಿದ ಅಂದಿನ ಇನ್ಸ್‌ಪೆಕ್ಟರ್ ಗೋವಿಂದ್ ರಾಜು ಕಟ್ಟಡವನ್ನು ನವೀಕರಿಸಲು ಆಸಕ್ತಿ ತೋರಿ ಸ್ಥಳೀಯರಿಂದ ಸಹಾಯ ಪಡೆದು ಕಟ್ಟಡವನ್ನು ರೂಫ್, ಫ್ಲೋರ್, ಪೇಂಟ್, ಎಲೆಕ್ಟ್ರಿಕ್ ವರ್ಕ್, ಪಾರ್ಕಿಂಗ್ ಶೆಡ್, ಫ್ಲ್ಯಾಗ್ ಪೋಸ್ಟ್ ಸುಮಾರು 7 ರಿಂದ 8 ಲಕ್ಷ ವೆಚ್ಚದಲ್ಲಿ ನವೀಕರಿಸಿದರು. ಮಂಗಳೂರು ನಗರದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಡಿಸಿಪಿಗಳಾದ ಹರಿರಾಂ ಶಂಕರ್ ಹಾಗೂ ದಿನೇಶ್ ಕುಮಾರ್ ಜತೆ ಮಂಗಳೂರು ನಗರ ಉತ್ತರ ಠಾಣೆಗೆ ಭೇಟಿ ನೀಡಿ ಕಟ್ಟಡದ ನವೀಕರಣವನ್ನು ಪರಿಶೀಲಿಸಿದರು.
1991ರಿಂದ ಇಲ್ಲಿಯವರೆಗೆ 25 ಠಾಣಾಧಿಕಾರಿಗಳನ್ನು ಈ ಹಳೆ ಕಟ್ಟಡ ಕಂಡಿದೆ. ಸಾವಿರಾರು ಸಿಬ್ಬಂದಿಯ ಕರ್ತವ್ಯಕ್ಕೆ ಸಾಕ್ಷಿಯಾಗಿದೆ. ಪ್ರಸಕ್ತ 68 ಮಂದಿ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಾಖಲೆಗಳ ಪ್ರಕಾರ 1889ರಲ್ಲಿ ಸುಮಾರು 16,000 ರೂ.ಗಳೊಂದಿಗೆ ಈ ಕಟ್ಟಡ ನಿರ್ಮಾಣವಾಗಿತ್ತು.
Kshetra Samachara
26/08/2021 04:36 pm