ಮುಲ್ಕಿ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಅಂಗಡಿಗಳು ತೆರೆದಿದ್ದರೂ ಜನಸಂಚಾರ ವಿರಳವಾಗಿವೆ.
ಹೆದ್ದಾರಿಯಲ್ಲಿ ಆಗೊಮ್ಮೆ ಈಗೊಮ್ಮೆ ಮಂಗಳೂರು- ಉಡುಪಿ ತಡೆರಹಿತ ಬಸ್ಸು ಸಂಚಾರವಿದ್ದರೂ ಪ್ರಯಾಣಿಕರ ಕೊರತೆಯಿಂದ ಈ ಬಸ್ ಗಳು ಖಾಲಿ ಖಾಲಿಯಾಗಿಯೇ ಓಡಾಟ ನಡೆಸುತ್ತಿರುವುದು ಕಂಡು ಬಂತು.
ಪ್ರಯಾಣಿಕರ ಕೊರತೆಯಿಂದ ಕಿನ್ನಿಗೋಳಿ-ಕಟೀಲು ಬಸ್ ಸಂಚಾರ ಸ್ಥಗಿತಗೊಂಡಿದೆ. ಕಾರ್ನಾಡ್ ಮಾರುಕಟ್ಟೆಯಲ್ಲಿ ಶನಿವಾರ ಸಂತೆ ರದ್ದುಗೊಂಡಿದ್ದರೂ ಕೆಲ ಬೀದಿ ವ್ಯಾಪಾರಿಗಳು ವಾಹನದಲ್ಲಿ ತರಕಾರಿ ಮಾರುತ್ತಿದ್ದು, ಜನಜಂಗುಳಿ ಉಂಟಾದಾಗ ಕೆಲವರು ಮುಲ್ಕಿ ನಪಂ ಮುಖ್ಯಾಧಿಕಾರಿಗೆ ದೂರು ನೀಡಿದರು.
ಕೂಡಲೇ ಮುಖ್ಯಾಧಿಕಾರಿ ಚಂದ್ರ ಪೂಜಾರಿ, ಸಿಬ್ಬಂದಿ ಜತೆ ಸ್ಥಳಕ್ಕೆ ಧಾವಿಸಿ ಬೀದಿ ವ್ಯಾಪಾರಸ್ಥರನ್ನು ಸ್ಥಳದಿಂದ ತೆರವುಗೊಳಿಸಿದಾಗ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ವ್ಯಾಪಾರಸ್ಥರು ʼಪಬ್ಲಿಕ್ ನೆಕ್ಸ್ಟ್ʼ ಜತೆ ವೀಕೆಂಡ್ ಕರ್ಫ್ಯೂ ನಲ್ಲಿ ವ್ಯಾಪಾರದ ಬಗ್ಗೆ ಸರಕಾರದ ತಾರತಮ್ಯ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು.
ಉಳಿದಂತೆ ಕಿನ್ನಿಗೋಳಿ, ಪಕ್ಷಿಕೆರೆ, ಹಳೆಯಂಗಡಿ, ಅತಿಕಾರಿಬೆಟ್ಟು, ಪಡುಪಣಂಬೂರು, ಮುಲ್ಕಿ ಪರಿಸರದಲ್ಲಿ ಮಕರ ಸಂಕ್ರಮಣದ ಸರಕಾರಿ ರಜೆಯೊಂದಿಗೆ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ.
Kshetra Samachara
15/01/2022 03:56 pm