ಮಲ್ಪೆ: ಮೀನುಗಾರಿಕೆ,ಕರಾವಳಿಯ ಪ್ರಮುಖ ಉದ್ಯೋಗ. ಕರಾವಳಿಯ ಸಾವಿರಾರು ಕುಟುಂಬ ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದೆ. ಆದರೆ ಜೂನ್ ಹಾಗೂ ಜುಲೈ ತಿಂಗಳಲ್ಲಿ ಮೀನುಗಾರಿಕೆ ಇರೋದಿಲ್ಲ. ಹೀಗಾಗಿ ಈ ಅವಧಿಯಲ್ಲಿ ಮೀನುಗಾರರು, ಮೀನುಗಾರಿಕೆಗೆ ಬಳಸಲ್ಪಡುವ ಬಲೆ ನೇಯುವ ವೃತ್ತಿಯಲ್ಲಿ ತೊಡಗುತ್ತಾರೆ.
ಇದೀಗ ಮಲ್ಪೆಯಲ್ಲಿ ಎಲ್ಲಿ ನೋಡಿದರೂ ಇದೇ ದೃಶ್ಯ.ಹತ್ತು ತಿಂಗಳು ಮೀನುಗಾರಿಕೆ ಮಾಡಿದರೆ ,ಎರಡು ತಿಂಗಳು ಬಲೆ ನೇಯುವ ,ಬಲೆ ರಿಪೇರಿ ಮಾಡುವ ಕಾಯಕ.ಇದೀಗ ನೂರಾರು ಮೀನುಗಾರರ ಜೊತೆಗೆ ಹೊರ ರಾಜ್ಯಗಳಿಂದಲೂ ಬಲೆ ನೇಯುವವರು ಮಲ್ಪೆಗೆ ಬಂದಿದ್ದಾರೆ.ಉತ್ತಮ ಮೀನು ಬೇಟೆಗೆ ಉತ್ತಮ ಬಲೆ ಬೇಕು. ನೀವು ನಂಬಲಿಕ್ಕಿಲ್ಲ ,ಎರಡು ಲಕ್ಷದಿಂದ 25 ಲಕ್ಷಗಳ ತನಕದ ಬಲೆಗಳನ್ನು ನೇಯುವುದು,ರಿಪೇರಿ ಮಾಡುವುದು ,ಮೇಂಟೇನ್ ಮಾಡುವುದೇ ಒಂದು ಸವಾಲಿಕ ಕೆಲಸ.
ಹೀಗೆ ಜೂನ್ ಮತ್ತು ಜುಲೈ ಎರಡು ತಿಂಗಳ ಕಾಲ ದೊಡ್ಡ ದೊಡ್ಡ ಬಲೆಗಳನ್ನುಜೋಡಿಸಿಡುವ ,ಸಿದ್ಧಪಡಿಸುವ ಕೆಲಸ ಮಾಡುತ್ತಾರೆ. ವಿವಿಧ ಬೋಟ್ಗಳು ಹಾಗೂ ದೋಣಿಗಳಿಗೆ ಬೇಕಾಗುವ ಹೊಸ ಬಲೆಯನ್ನು ನೇಯುವ ಕೆಲಸವನ್ನು ಸಮುದ್ರದ ಬದಿಯಲ್ಲೇ ಶೆಡ್ ಹಾಕಿ ಮಾಡುತ್ತಿರುತ್ತಾರೆ. ಅಲ್ಲದೇ, ಮೀನುಗಾರಿಕೆ ನಡೆಸುವಾಗ ತುಂಡಾದ ಬಲೆಯನ್ನು ಸರಿಪಡಿಸುವ ಕಾರ್ಯ ಮಾಡುತ್ತಾರೆ.
ಜುಲೈ ತಿಂಗಳ ಕೊನೆಯವರೆಗೂ ಬಲೆ ನೇಯುವ ಕೆಲಸ ಮಾಡಿ, ಆಗಸ್ಟ್ ತಿಂಗಳಲ್ಲಿ ಯಾಂತ್ರೀಕೃತ ಮೀನುಗಾರಿಕೆ ಆರಂಭಿಸುತ್ತಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಮೀನುಗಾರರು ಬಲೆ ನೇಯುವ ಕೆಲಸ ಮುಗಿಸಿ ಮೀನು ಬೇಟೆಗೆ ಸಮುದ್ರಕ್ಕಿಳಿಯಲಿದ್ದಾರೆ.
ವಿಶೇಷ ವರದಿ: ರಹೀಂ ಉಜಿರೆ
Kshetra Samachara
27/07/2022 05:30 pm