ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಇದು ಕರ್ನಾಟಕ ಮಾತ್ರ ಅಲ್ಲ,ಭಾರತಕ್ಕೇ ಸಂದ ಗೌರವ ಎನ್ನಬಹುದು. ಅಮೆರಿಕದ ವೈದ್ಯಕೀಯ ಪಠ್ಯಗ್ರಂಥವೊಂದಕ್ಕೆ ಉಡುಪಿಯ ಕಲಾವಿದರು ಚಿತ್ರ ರಚಿಸಿ ಕೊಟ್ಟಿದ್ದಾರೆ,ಅದೂ ಒಂದೆರಡಲ್ಲ,ಐದು ಸಾವಿರಕ್ಕೂ ಮಿಕ್ಕಿದ ಚಿತ್ರಗಳು.ಈ ಕಲಾವಿದ ಮಾತ್ರ ಇನ್ನೂ ಎಲೆಮರೆಯ ಕಾಯಿಯಂತೆ ಯಾವುದೇ ಪ್ರಚಾರ ಬಯಸದೇ ಕಲಾಸೇವೆ ಮಾಡುತ್ತಿದ್ದಾರೆ. ಯಾರೀ ಅದೃಷ್ಟವಂತ? ಈ ಸ್ಟೋರಿ ನೋಡಿ.
ಇವರು ,ಕಲಾವಿದ ಪಿ.ಎನ್ ಆಚಾರ್ಯ.ಬಾಲ್ಯದಿಂದಲೂ ಕಲಾಸೇವೆ ಮಾಡುತ್ತಿರುವವರು.ಆದರೆ ಹಿತ್ತಿಲ ಗಿಡ ಮದ್ದಲ್ಲ ಎಂಬಂತೆ ಇಲ್ಲಿ ಇವರಿಗೆ ಮನ್ನಣೆ ಸಿಕ್ಕಿದ್ದು ಕಡಿಮೆಯೇ.ಆದರೆ ದೂರದ ಅಮೇರಿಕಾದ ಯೂನಿವರ್ಸಿಟಿಯೊಂದು ಇವರ ಪ್ರತಿಭೆ ಗುರುತಿಸಿ ಮಹತ್ತರವಾದ ಗೌರವ ನೀಡಿದೆ.ಅಮೆರಿಕದ ವೈದ್ಯಕೀಯ ಪಠ್ಯಗ್ರಂಥವೊಂದಕ್ಕೆ ಸಾವಿರಾರು ಚಿತ್ರಗಳನ್ನು ಬರೆದು ಕೊಡುವ ಮಹತ್ವದ ಕೈಂಕರ್ಯ ಇವರನ್ನು ಹುಡುಕಿಕೊಂಡು ಬಂದಿದೆ. ಇಂಥದ್ದೊಂದು ಅಮೋಘ ಅವಕಾಶಕ್ಕೆ ಪಾತ್ರರಾಗಿರುವ ಪಿ.ಎನ್ . ಆಚಾರ್ಯ ಈಗಾಗಲೇ ಐದು ಸಾವಿರಕ್ಕೂ ಮಿಕ್ಕಿ ಚಿತ್ರಗಳನ್ನು ರಚಿಸಿ ಅಮೇರಿಕಾದವರ ಮನ ಗೆದ್ದಿದ್ದಾರೆ.
ಜಗತ್ತಿನ ಶ್ರೇಷ್ಠ ಖಾಸಗಿ ಸಂಶೋಧನಾ ವಿವಿ ಅಮೇರಿಕಾದ ಬೋಸ್ಟನ್ ನ ವಿವಿ (ಲಿನಸ್ ಪಬ್ಲಿಕೇಷನ್) ಅನಾಟಮಿ ವಿಭಾಗ ಸಿದ್ಧಪಡಿಸುತ್ತಿರುವ ವೈದ್ಯಕೀಯ ಗ್ರಂಥವೊಂದಕ್ಕೆ ಈಗ ಆಚಾರ್ಯ ಅವರು ಸಾವಿರಾರು ಚಿತ್ರಗಳನ್ನು ರಚಿಸಿ ಕೊಟ್ಟಿದ್ದಾರೆ.ನಾಯಿ ,ಬೆಕ್ಕು ,ಕುದುರೆಯ ಚಿತ್ರ ರಚಿಸಿ ಸೈ ಎನಿಸಿರುವ ಇವರು ಈಗ ದನದ ಚಿತ್ರ ರಚನೆಯಲ್ಲಿ ತಲ್ಲೀನರಾಗಿದ್ದಾರೆ.
ಈಗಾಗಲೇ ಮೂರು ಸಂಪುಟಗಳು ಹೊರಬಂದಿವೆ.ಇವರಿಗೆ ಆಫರ್ ಬಂದಿದ್ದು ಒಂಬತ್ತು ವರ್ಷಗಳ ಹಿಂದೆ.ವೈದ್ಯಕೀಯ ಪಠ್ಯಕ್ಕೆ ನಾಯಿ ಬೆಕ್ಕು ಕುದುರೆ ಮತ್ತು ಈಗ ದನದ ರೇಖೆಗಳನ್ನು ಬಿಡಿಸುವ ಸವಾಲನ್ನು ಇವರು ಸ್ವೀಕರಿಸಿ ಗೆದ್ದಿದ್ದಾರೆ.ಇದೀಗ ಜಗತ್ತಿನ ಲಕ್ಷಾಂತರ ವಿದ್ಯಾರ್ಥಿಗಳು ,ಸಂಶೋಧಕರು ಓದುವ ಪಠ್ಯದಲ್ಲಿ ಇವರದ್ದೇ ಚಿತ್ರಗಳಿವೆ.ಅಷ್ಟೊಂದು ಕರಾರುವಾಕ್ಕಾಗಿ ಚಿತ್ರ ಬಿಡಿಸಿ ,ಇದೀಗ ನಾಲ್ಕನೇ ಸಂಪುಟಕ್ಕಾಗಿ ಚಿತ್ರ ರಚನೆಯಲ್ಲಿ ತೊಡಗಿದ್ದಾರೆ.
ಉಡುಪಿಯ ಕೂಡಂಕೂರಿನ ಪಿ. ಎನ್. ಆಚಾರ್ಯ ಮಣಿಪಾಲ ವಿವಿಯ ನಿವೃತ್ತ ಮುಖ್ಯ ಕಲಾವಿದ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯನ್ ಮಾಜಿ ಸದಸ್ಯರೂ ಹೌದು.ಇದು ಸುಲಭವಾಗಿ ಸಿಕ್ಕ ಅವಕಾಶವಲ್ಲ. ಬೋಸ್ಟನ್ ವಿವಿಯ ಈ ಸೇವೆಗಾಗಿ ಜಗತ್ತಿನ ನಾನಾ ಕಲಾವಿದರು ಅರ್ಜಿ ಹಾಕಿದ್ದರು. ಆ ಎಲ್ಲ ಕಲಾವಿದರ ಚಿತ್ರಗಳನ್ನು ಬಿಟ್ಟು ಅಲ್ಲಿನ ವಿವಿ ಆಡಳಿತ ಮಂಡಳಿ ಆಚಾರ್ಯರ ಕಲಾಕೃತಿಗಳಿಗೆ ಸೈ ಎಂದಿದೆ.ಸದ್ಯ ಇವರು ರಚಿಸಿರುವ ಸಾವಿರಾರು ಚಿತ್ರಗಳು ವಿಶ್ವಮನ್ನಣೆ ಪಡೆದಿವೆ.
PublicNext
28/04/2022 01:13 pm