ಮಂಗಳೂರು: ತೆಂಗಿನಮರ ಹತ್ತುವುದು ಸುಲಭ ಸಾಧ್ಯವಲ್ಲ. ಸ್ವಲ್ಪ ಎಡವಟ್ಟಾದರೂ ಬಿದ್ದು ಸಾವು - ನೋವನ್ನು ಎದುರು ನೋಡಬೇಕಾಗುತ್ತದೆ. ಆದರೆ ದ.ಕ. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರವು ತೆಂಗು ಅಭಿವೃದ್ಧಿ ಮಂಡಳಿ ಪ್ರಾಯೋಜಕತ್ವದಲ್ಲಿ 'ತೆಂಗಿನ ಮರ ಹತ್ತುವ’ ತರಬೇತಿ ನೀಡುವ ಮೂಲಕ ದ.ಕ.ಜಿಲ್ಲೆಯ ಆಸಕ್ತ ನಿರುದ್ಯೋಗಿ ಯುವ ಸಮುದಾಯಕ್ಕೆ ವರದಾನವಾಗಿದೆ.
ನಗರದ ಎಕ್ಕೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ 20 ಮಂದಿಗೆ ಆರು ದಿನಗಳ ತರಬೇತಿ ನೀಡಲಾಗುತ್ತಿದೆ. ಇವರಲ್ಲಿ ಮೂವರು ಯುವತಿಯರೂ ತರಬೇತಿ ಪಡೆಯುತ್ತಿರುವುದು ವಿಶೇಷ. ಇವರಿಗೆ ಉಚಿತ ಊಟ ವಸತಿ ಸೌಲಭ್ಯದೊಂದಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಜೊತೆಗೆ ಉಚಿತವಾಗಿ ತೆಂಗಿನ ಮರ ಹತ್ತಲು ಸಲಕರಣೆಯನ್ನು ನೀಡಿದ್ದಲ್ಲದೇ ತರಬೇತಿ ಪೂರೈಸಿದವರಿಗೆ 1 ವರ್ಷದ ತಲಾ 5 ಲಕ್ಷ ರೂ. ಮೌಲ್ಯದ ಅಪಘಾತ ವಿಮೆಯನ್ನು ಒದಗಿಸಲಾಗುತ್ತದೆ.
ಈವರೆಗೆ 200 ಮಂದಿ ತೆಂಗಿನಮರ ಹತ್ತುವ ತರಬೇತಿ ಪಡೆದಿದ್ದಾರೆ. ಈ ಹಿಂದೆ ಇಲ್ಲಿಯೇ ತರಬೇತಿ ಪಡೆದಿರುವ ಅನುಷ್ ಹಾಗೂ ದಿನೇಶ್ ಎಂಬ ಯುವಕರು ತೆಂಗಿನಮರ ಹತ್ತುವ ಮುಖ್ಯ ತರಬೇತುದಾರರಾಗಿದ್ದಾರೆ. ಇವರು ಇಂದು ನಗರದಲ್ಲಿ ಕಾಯಿ ಕೀಳಲು ಹೋಗುತ್ತಿದ್ದು, ದಿನಕ್ಕೆ 80-100 ಮರಗಳಿಂದ ಕಾಯಿ ಕೀಳುತ್ತಾರೆ. ಒಂದು ಮರ ಏರಲು 45-50 ರೂ. ದರ ವಿಧಿಸುವ ಇವರು ದಿನಕ್ಕೆ ಸರಾಸರಿ 2000-3000 ರೂ. ದುಡಿಯುತ್ತಾರೆ. ತೆಂಗಿನಮರ ಹತ್ತುವ ಕಾರ್ಯಾಗಾರಕ್ಕೆ ಬೇಡಿಕೆ ಹೆಚ್ಚಿದ್ದು, ಕುಂದಾಪುರದಿಂದಲೂ ಅರ್ಜಿ ಬಂದಿತ್ತು. ಸದ್ಯ ದ.ಕ.ಜಿಲ್ಲೆಯ ನಿರುದ್ಯೋಗಿಗಳಿಗೆ ಮಾತ್ರ ತರಬೇತಿ ನೀಡಲಾಗುತ್ತಿರುವುರಿಂದ ಜಿಲ್ಲೆಯ 20 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಈ ತರಬೇತಿಯು ನಿರುದ್ಯೋಗಿ ಯುವಕರಿಗೆ ವರದಾನವಾಗಿದೆಯಲ್ಲದೇ, ಕಾಯಿ ಕೀಳಲು ಕೆಲಸಗಾರರು ಸಿಗದ ಸಮಸ್ಯೆ ಎದುರಿಸುತ್ತಿರುವ ಕೃಷಿಕರಿಗೂ ಸುಲಭದಲ್ಲಿ ಜನ ಸಿಗುವಂತಾಗಿದೆ.
-ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
PublicNext
19/01/2023 09:45 am