ಬೈಂದೂರು: ಒಂಟಿತನದ ಬದುಕು ನಡೆಸುತ್ತಿರುವ ಇಳಿ ವಯಸ್ಸಿನ ಬೈಂದೂರು ತಾಲೂಕಿನ ನಾಡ ಗ್ರಾಮದ ತೆಂಕಬೈಲು ಗೋಳಿ ಹಿತ್ಲು ನಿವಾಸಿ ಚಂದು ಪೂಜಾರ್ತಿ(70) ಅವರ ಮನೆ ಸಂಪೂರ್ಣ ದುರವಸ್ಥೆಯಲ್ಲಿದೆ. ಇಂದಲ್ಲ ನಾಳೆ ಬೀಳುವ ಸ್ಥಿತಿಯಲ್ಲಿದೆ.
ಕಳೆದ ವಾರ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿದ ಕೂಡಲೇ ಸಮಾನ ಮನಸ್ಕರ ತಂಡ ಚಂದು ಅಜ್ಜಿಗೆ ಮನೆ ನಿರ್ಮಾಣಕ್ಕೆ ಮುಂದಾಗಿದೆ. ಅಜ್ಜಿಯ ಮನೆ ನಿರ್ಮಾಣಕ್ಕೆ ವಿಜಯದಶಮಿ ದಿನದಂದು ಪುರೋಹಿತರ ಮಾರ್ಗದರ್ಶನದಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಅಸಹಾಯಕ ಬದುಕು ನಡೆಸುತ್ತಿರುವ ಚಂದು ಅಜ್ಜಿಗೆ ಮನೆ ನಿರ್ಮಿಸಿ ಕೊಡಬೇಕೆಂದು ಸಂಕಲ್ಪ ಮಾಡಿ ಬಂದಿರುವ ಸಮಾನ ಮನಸ್ಕರ ತಂಡವೊಂದು ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ದಾನಿಗಳು ಹಾಗೂ ಸಂಘ-ಸಂಸ್ಥೆಗಳ ನೆರವಿನಿಂದ ಮನೆ ನಿರ್ಮಾಣಕ್ಕೆ ಮುಂದಾಗಿದೆ. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನಾವುಂದ ಅಧ್ಯಕ್ಷರು ಪುರೋಹಿತರು ಗ್ರಾಮ ಪಂಚಾಯತ್ ಸದಸ್ಯರು ಮಾಧ್ಯಮ ಮಿತ್ರರು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.
PublicNext
09/10/2022 02:06 pm