ಕುಂದಾಪುರ: ಗಂಗೊಳ್ಳಿಯ ಮೀನುಗಾರಿಕಾ ಬಂದರಿನ ಜೆಟ್ಟಿ ಮತ್ತೊಮ್ಮೆ ಕುಸಿದು ಬಿದ್ದಿದ್ದು ಸ್ಥಳೀಯ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವೈಜ್ಞಾನಿಕವಾಗಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಜಟ್ಟಿ ಕುಸಿದಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಬುಧವಾರ ಸಂಜೆ ಇಲ್ಲಿನ ಸುಮಾರು 150 ಮೀಟರಿಗೂ ಅಧಿಕ ಜೆಟ್ಟಿ ಕುಸಿದಿರುವುದು ಕಂಡುಬಂದಿದೆ. ಇದರಿಂದ ಮೀನುಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಂಜೆ ನಿರಂತರವಾಗಿ ಕುಸಿತವಾಗುತ್ತಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ. 13 ವರ್ಷಗಳ ಹಿಂದೆ ಗಂಗೊಳ್ಳಿ ಜೆಟ್ಟಿ ನಿರ್ಮಾಣವಾಗಿದ್ದು ಈ ಹಳೆ ಜೆಟ್ಟಿ ಕೂಡ ಕುಸಿತಕ್ಕೊಳಗಾಗಿತ್ತು. ಬಳಿಕ ಶಿವಮೊಗ್ಗ ಸಂಸದ ಹಾಗೂ ಬೈಂದೂರು ಶಾಸಕರ ಮುತುವರ್ಜಿಯಲ್ಲಿ 12 ಕೋಟಿ ರೂ. ಅನುದಾನ ನೂತನ ಜೆಟ್ಟಿ ಕಾಮಗಾರಿಗೆ ಮಂಜೂರಾಗಿ 180 ಮೀಟರ್ ಕೆಲಸ ಕೂಡ ನಡೆದಿತ್ತು. ಅವೈಜ್ಞಾನಿಕ ಕಾಮಗಾರಿ ಮಾಡಿದ ಪರಿಣಾಮ ಹಳೆ ಜೆಟ್ಟಿ ಕುಸಿತಕ್ಕೊಳಗಾಗಿ ಈಗ ನಡೆಯುತ್ತಿರುವ ಕಾಮಗಾರಿಗಾಗಿ ಮಾಡಿದ ಪಿಲ್ಲರ್ ಮೇಲೆ ಬಿದ್ದು ಹಳೆಯ ಪಿಲ್ಲರ್ ಕೂಡ ಕುಸಿದಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
29/09/2022 11:37 am