ಸುರತ್ಕಲ್: ಸಣ್ಣ ಮಳೆಗೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಾದು ಹೋಗುವ ಸುರತ್ಕಲ್ ಅಂಡರ್ ಪಾಸ್ ನಲ್ಲಿ ನೀರು ತುಂಬುತ್ತಿರುವುದರಿಂದ ಶಾಲಾ ಮಕ್ಕಳು, ಪಾದಚಾರಿಗಳು ಸಂಚರಿಸಲು ಪಾಡು ಪಡುವಂತಾಗಿದೆ. 8 ವರ್ಷಗಳ ಹಿಂದೆ ಈ ಅಂಡರ್ ಪಾಸ್ ನಿರ್ಮಾಣಗೊಂಡಿದ್ದು, ಹಿಂದೆ ಅಷ್ಟಾಗಿ ಯಾರೂ ಇದನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ರಸ್ತೆ ಅಗಲೀಕರಣಗೊಂಡ ಬಳಿಕ ರಸ್ತೆ ದಾಟಲು ಸುಲಭ ಸಾಧ್ಯವಿರದ ಕಾರಣ ಶಾಲಾ ಮಕ್ಕಳು ಇದೇ ಅಂಡರ್ ಪಾಸ್ ನ ಮೊರೆ ಹೊಕ್ಕಿದ್ದಾರೆ.
ಇಲ್ಲಿನ ಎರಡು ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳು ಈ ಅಂಡರ್ ಪಾಸ್ ಅನ್ನು ಅವಲಂಬಿಸಿದ್ದಾರೆ. ಆದರೆ ಸಣ್ಣ ಮಳೆಗೂ ಈ ಅಂಡರ್ ಪಾಸ್ ನಲ್ಲಿ ಮೊಣಕಾಲು ಮುಳುಗುವಷ್ಟು ನೀರು ತುಂಬುತ್ತದೆ. ಸಣ್ಣ ಮಕ್ಕಳು ಈ ನೀರಿನಲ್ಲಿ ನಡೆದು ಹೋಗುವುದು ಅಪಾಯಕಾರಿ. ಅಂಡರ್ ಪಾಸ್ ನೊಳಗೆ ಸಂಗ್ರಹವಾದ ನೀರು ಹರಿಯಲು ಸಣ್ಣದಾದ ಪೈಪು ಬಿಟ್ಟರೆ ಭಾರೀ ನೀರು ನೀಸರಾಗವಾಗಿ ಹರಿದು ಹೋಗಲು ಬೇರೆ ವ್ಯವಸ್ಥೆಯಿಲ್ಲ. ಅಲ್ಲದೆ ಕಲ್ಲು, ಕೆಸರು ಮಣ್ಣು ಸಂಗ್ರಹವಾಗಿ ಅಂಡರ್ ಪಾಸ್ ರಾಡಿಯಂತಾಗಿ ನಡೆದುಹೋಗಲು ಸಾಧ್ಯವಿಲ್ಲ.
ಕೆಲ ವರ್ಷಗಳಿಂದ ಈ ಸಮಸ್ಯೆ ತಲೆದೋರಿದ್ದರೂ ಎನ್ಎಚ್ಐಎ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನಾದರೂ ಎಚ್ಚೆತ್ತು ಸರಿಯಾಗಿ ನೀರು ಹರಿದುಹೋಗಲು ವ್ಯವಸ್ಥೆ ಮಾಡಬೇಕಿದೆ. ಅಪಾಯ ಸಂಭವಿಸಿದ ಬಳಿಕ ಎಚ್ಚೆತ್ತರೆ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ತಕ್ಷಣ ಎನ್ಎಚ್ಐಎ ಈ ಸಮಸ್ಯೆಗೆ ಸರಿಯಾದ ವ್ಯವಸ್ಥೆ ಮಾಡಬೇಕಿದೆ.
Kshetra Samachara
15/09/2022 10:54 am