ಪುತ್ತೂರು : ಪುತ್ತೂರು ಉಪ್ಪಿನಂಗಡಿ ರಸ್ತೆಯ ದಾರಂದಕುಕ್ಕು ಎಂಬಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಮನವಿ ಆ ಭಾಗದ ಜನರು ಸಂಬಂಧಪಟ್ಟ ಅಧಿಕಾರಿಗಳು ಹಾಗು ಜನಪ್ರತಿನಿಧಿ ನೀಡಿದ್ದು, ಇದೀಗ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾಗಿದೆ. ಬನ್ನೂರು ಗ್ರಾಮಪಂಚಾಯತ್ ದಾರಂದಕುಕ್ಕು ಜಂಕ್ಷನ್ ನಲ್ಲಿ ಈ ಬಸ್ ನಿಲ್ದಾಣವನ್ನು ನಿರ್ಮಿಸಲು ಬನ್ನೂರು ಗ್ರಾಮಪಂಚಾಯತ್ ಮುಂದಾಗಿದ್ದು, ಈ ನಿರ್ಧಾರಕ್ಕೆ ಸ್ಥಳೀಯರೊಬ್ಬರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸರಕಾರಿ ಜಾಗವಾಗಿದ್ದರೂ, ಬಸ್ ನಿಲ್ದಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ವ್ಯಕ್ತಿಯ ವಿರುದ್ಧ ಗ್ರಾಮಸ್ಥರು ಹರಿಹಾಯ್ದ ಘಟನೆಯೂ ನಡೆದಿದೆ.
ಪುತ್ತೂರು ಶಾಸಕ ಸಂಜೀವ ಮಠಂದೂರು ನಿಧಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ದಾರಂದಕುಕ್ಕು ಜಂಕ್ಷನ್ ಬಳಿಯೇ ಈ ಬಸ್ ನಿಲ್ದಾಣವನ್ನು ನಿರ್ಮಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಬೇಕಾದ ಸ್ಥಳವನ್ನೂ ಖಾಯ್ದಿರಿಸಲಾಗಿದೆ.
ಈಗಾಗಲೇ ಈ ಜಾಗದ ಸರ್ವೆ ಕಾರ್ಯವೂ ಪೂರ್ಣಗೊಂಡಿದ್ದು, ಸರಕಾರ ಜಾಗ ಎನ್ನುವುದು ದೃಢಪಟ್ಟ ಬಳಿಕವೇ ಜಾಗವನ್ನು ಸಮತಟ್ಟು ಮಾಡುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಆರಂಭಿಸಿದೆ. ಆದರೆ ಬಸ್ ನಿಲ್ದಾಣ ನಿರ್ಮಿಸುತ್ತಿರುವ ಜಾಗ ತಮ್ಮದೆಂದು ಸ್ಥಳೀಯ ವ್ಯಕ್ತಿಯೋರ್ವರು ಜಾಗದ ಮರು ಸರ್ವೆಗೆ ಅರ್ಜಿ ಸಲ್ಲಿಸಿದ ಹಿನ್ನಲೆ ಸರ್ವೇ ಕಾರ್ಯವನ್ನು ಸೆಪ್ಟೆಂಬರ್ 9 ರಂದು ನಡೆಸಲಾಯಿತು. ಸರ್ವೆ ಸಂದರ್ಭದಲ್ಲಿ ಸೂಚಿಸಿದ ಸ್ಥಳದಲ್ಲೇ ನಿಲ್ದಾಣ ನಿರ್ಮಿಸಬೇಕೆಂದು ಸಾರ್ವಜನಿಕರು ಪಟ್ಟು ಹಿಡಿದರು.
Kshetra Samachara
10/09/2022 08:34 pm