ಮಂಗಳೂರು: ದೂರದ ಕೆನಡಾದ ಟೊರೆಂಟೊದಲ್ಲಿ ಭಾರತದ ಗಣೇಶ ಚತುರ್ಥಿ ಆಚರಣೆಗೊಂಡು ತುಳು ಧ್ವಜವು ಹಾರಾಟಗೊಂಡು ಎಲ್ಲರ ಗಮನ ಸೆಳೆದಿದೆ. ವಿಶೇಷವೆಂದರೆ ಈ ತುಳುಧ್ವಜವನ್ನು ಕೈಯಲ್ಲಿಯೇ ತಯಾರಿಸಿ ಹಾರಾಟ ಮಾಡಲಾಗಿದೆ.
ಹೌದು... ಕರಾವಳಿ ಮೂಲದವರಾದ ರೋಶನ್, ಶ್ರೀದೇವಿ, ಲಾವಣ್ಯ, ಆಕಾಶ್ ಅವರ ತಂಡ ಉದ್ಯೋಗ ನಿಮಿತ್ತ ಕೆನಡಾದ ಟೊರೆಂಟೊದಲ್ಲಿ ವಾಸವಾಗಿದೆ. ತಾಯ್ನಾಡಿನಿಂದ ದೂರವಿದ್ದರೂ, ಇಲ್ಲಿನ ಹಬ್ಬ ಆಚರಣೆ, ಮಾತೃಭಾಷೆಯ ಬಗ್ಗೆ ಅಭಿಮಾನವನ್ನು ಹೊಂದಿರುವ ಈ ತಂಡ ಗಣೇಶೋತ್ಸವ ಆಚರಿಸಿ, ತುಳುಧ್ವಜ ಹಾರಾಟ ಮಾಡಿದೆ. ಈ ಮೂಲಕ ತಮ್ಮ ಮಾತೃಭಾಷೆಯ ಅಭಿಮಾನವನ್ನು ಮೆರೆದಿದೆ.
ಟೊರೆಂಟೊದ ಶೃಂಗೇರಿ ಶಾರದಾಂಬಾ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ತಂಡ ಆಚರಿಸಿದೆ. ನಮ್ಮ ಕುಡ್ಲ ಫ್ರೆಂಡ್ಸ್ ಬಳಗ ಪೂಜಾ ಕೈಂಕರ್ಯವನ್ನು ನೆರವೇರಿಸಿ ಬಳಿಕ ಕೈಯಲ್ಲೇ ತಯಾರಿಸಿರುವ ತುಳು ಬಾವುಟವನ್ನು ಹಾರಿಸಿದೆ. ಈ ಮೂಲಕ ತಮ್ಮ ಮಾತೃಭಾಷಾಭಿಮಾನವನ್ನು ತಮ್ಮದಲ್ಲದ ನೆಲದಲ್ಲಿ ಮೆರೆದಿರುವ ಈ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ.
Kshetra Samachara
06/09/2022 09:03 pm