ವರದಿ: ರಹೀಂ ಉಜಿರೆ
ಬೈಂದೂರು: ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳ ಕೆಲವೆಡೆ ಸರ್ಕಾರಿ ಶಾಲೆ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಈ ಮುಂಗಾರಿನಲ್ಲಿ ಬಂದ ಅಬ್ಬರದ ಮಳೆಗೆ ಕೆಲವು ಶಾಲೆಗಳ ಕೊಠಡಿಗಳು ಸಂಪೂರ್ಣ ಹಾನಿಗೊಂಡಿವೆ. ಇಂಥ ಶಾಲೆಗಳನ್ನು ಗುರುತಿಸಿ ತಕ್ಷಣ ಸಂಬಂಧಪಟ್ಟ ಇಲಾಖೆ ದುರಸ್ತಿ ಮಾಡಬೇಕಿದೆ.
ಬೈಂದೂರು ತಾಲೂಕಿನ ತೆಗ್ಗರ್ಸೆ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಪಾಠಗಳು ನಡೆಯುತ್ತಿವೆ. ಆದರೆ ಈ ಶಾಲೆಯ ಎರಡು ತರಗತಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಈ ಎರಡು ತರಗತಿಯಲ್ಲಿ ಗೆದ್ದಲುಗಳು ತುಂಬಿದ್ದು ಅಪಾಯಕಾರಿ ಸ್ಥಿತಿ ತಲುಪಿವೆ. ಪಾಠ ಪ್ರವಚನ ನಡೆಯುವಾಗ ಗೆದ್ದಲು ಮಕ್ಕಳ ತಲೆಯ ಮೇಲೆ ಬಿದ್ದ ಉದಾಹರಣೆಯೂ ಇದೆ.
ಮೊದಲೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಲೇ ಇದೆ. ಆದರೆ ಇದು ಗ್ರಾಮೀಣ ಪ್ರದೇಶವಾದ್ದರಿಂದ ಮಕ್ಕಳ ಸಂಖ್ಯೆಗೆ ಕೊರತೆ ಏನಿಲ್ಲ. ಹೀಗಿರುವಾಗ ಮಕ್ಕಳಿಗೆ ಸುಸಜ್ಜಿತ ಕೊಠಡಿಗಳನ್ನು ಒದಗಿಸಿ ಮಕ್ಕಳನ್ನು ಶಾಲೆಯತ್ತ ಸೆಳೆಯುವ ಪ್ರಯತ್ನ ಆಗಬೇಕು. ಮುಂದಿನ ಮಳೆಗಾಲಕ್ಕೂ ಮುನ್ನ ಈ ಕೆಲಸ ಆಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಸ್ಥಳೀಯರ ಆತಂಕವಾಗಿದೆ. ಒಂದೋ ಈ ಕಟ್ಟಡವನ್ನು ತಕ್ಷಣ ದುರಸ್ತಿ ಮಾಡಬೇಕು ಅಥವಾ ಬೇರೆ ಕಟ್ಟಡದ ವ್ಯವಸ್ಥೆ ಮಾಡಬೇಕು ಎಂದು ಎಸ್ ಡಿಎಂಸಿ ಪರವಾಗಿ ಸ್ಥಳೀಯ ಸಮಾಜ ಸೇವಕ ವೀರಭದ್ರ ಗಾಣಿಗ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
Kshetra Samachara
05/09/2022 09:27 pm