ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಸ್ವಾತಂತ್ರ್ಯ ಕಸಿದುಕೊಂಡ ಆಡಳಿತ ವರ್ಗ : ಹುಣಸೆ ಮಕ್ಕಿ ಗ್ರಾಮಸ್ಥರ ಕಣ್ಣೀರ ಕಥೆ

ಬೈಂದೂರು: ಕುಡಿಯುವ ನೀರು, ಉತ್ತಮ ರಸ್ತೆ, ಸರಿಯಾದ ವಿದ್ಯುತ್ ಸಂಪರ್ಕ, ಅಂಗನವಾಡಿ ಮತ್ತೊಂದು ಶಾಲೆ, ಇವಿಷ್ಟು ಒಂದು ಹಳ್ಳಿಗೆ ಇದ್ದರೆ ಮಾತ್ರ ಆ ಹಳ್ಳಿ ಉದ್ದಾರವಾಗುತ್ತದೆ. ಆದರೆ ಇದ್ಯಾವುದೂ ಇಲ್ಲದೇ ಇದ್ದರೆ ಆ ಹಳ್ಳಿ ಜನ ಹೇಗೆ ಬದುಕಬಹುದು? ಊಹಿಸಲೂ ಸಾಧ್ಯವಿಲ್ಲ ಅಲ್ಲವೇ? ಆದರೆ ಅಂತಹಾ ಹಳ್ಳಿಯೊಂದು ನಮ್ಮಲ್ಲಿದೆ. ಇಲ್ಲಿನ ಜನರ ಓಟು ಬೇಕು, ಆದರೆ ಆ ಜನಗಳ ಅಭಿವೃದ್ಧಿ ನಮ್ಮ ಜನಪ್ರತಿನಿಧಿಗಳಿಗೆ ಬೇಕಿಲ್ಲ ಎನ್ನುವುದೇ ದುರಂತ.

ಹೌದು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಹುಣಸೆ ಮಕ್ಕಿ ಎಂಬ ಗ್ರಾಮದ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಹುಣಸೇ ಮಕ್ಕಿ ಎಂಬ ಊರಿನಲ್ಲಿ ಸುಮಾರು 70 ಕುಟುಂಬಗಳಿವೆ. ಒಟ್ಟಾರೆ 500ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ! ನೂರರಷ್ಟು ವಿದ್ಯಾರ್ಥಿಗಳಿದ್ದಾರೆ. ಆದರೆ ಈ ಮಕ್ಕಳ್ಯಾರೂ ಅಂಗನವಾಡಿಯತ್ತ ಮುಖ ಮಾಡಿಲ್ಲ. ಯಾಕೆಂದರೆ ಇಲ್ಲಿ ಅಂಗನವಾಡಿಯೇ ಇಲ್ಲ.! ಒಂದೊಮ್ಮೆ ಅಂಗನವಾಡಿಗೆ ಹೋಗಬೇಕೆಂದರೆ ಅಪಾಯಕಾರಿ ಮರದ ಕಾಲುಸಂಕಗಳನ್ನು ದಾಟಿ ಎರಡು ಕಿ.ಮೀ ದೂರ ನಡೆದು ಸಾಗಬೇಕು.

ಇನ್ನು ಶಾಲೆಗೆ ಹೋಗಬೇಕೆಂದರೆ ಬೆಳಿಗ್ಗೆ 7.30ಕ್ಕೆ ನಡೆಯಲಾರಂಭಿಸಿದರೆ ಐದು ಕಿ.ಮೀ ಸಾಗಿ ಶಾಲೆ ಸೇರಬೇಕಾದ ಪರಿಸ್ಥಿತಿ. ಸಂಜೆಯೂ ಮನೆಗೆ ಬರುವ ಸಮಯ ಹೇಳಲಾಗದು.

ಸರ್ಕಾರ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಬೇಸಿಗೆಯಲ್ಲಿ ಈ ಕುಟಂಬಗಳ ಪರಿಸ್ಥಿತಿ ಹೇಳತೀರದು. ವಿದ್ಯುತ್ ವ್ಯವಸ್ಥೆಯೂ ಸರಿಯಾಗಿಲ್ಲದ ಕಾರಣ ರಾತ್ರಿ ದೀಪದ ಬೆಳಕೇ ಗತಿ. ದೀಪ ಹಚ್ಚಲು ಸೀಮೆ ಎಣ್ಣೆಯು ಸಹ ಸಿಗುತ್ತಿಲ್ಲ.

ಇನ್ನು ರಸ್ತೆ ಇದು ದೇವರಿಗೇ ಪ್ರಿಯ. ಹಲವು ವರ್ಷಗಳಿಂದ ಇಲ್ಲಿನ ಜನ ರಸ್ತೆಗಾಗಿ ಹೋರಾಡಿದ್ದಾರೆ. ಮನವಿ ಮಾಡದ ಇಲಾಖೆಗಳಿಲ್ಲ, ಜನಪ್ರತಿನಿಧಿಗಳಿಲ್ಲ, ಆದರೆ ಸ್ಪಂದನೆ ಮಾತ್ರ ಶೂನ್ಯ. ಕೆಲವು ದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿ ಕಚೇರಿಯಗೆ ತೆರಳಿದ ಗ್ರಾಮಸ್ಥರೆಲ್ಲ ಮನವಿ ಮಾಡಿದ್ದಾರೆ. ಆದರೂ ಈವರೆಗೂ ಏನು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಹುಣಸೆಮಕ್ಕಿ ಗ್ರಾಮಸ್ಥರು.

ಆರೋಗ್ಯದ ಸಮಸ್ಯೆಯಾದರಂತೂ, ಕಂಬಳಿ, ಹಾಸಿಯನ್ನು ಹೊತ್ತುಕೊಂಡು ಹೋಗಬೇಕಾದ ಸ್ಥಿತಿ. ಗರ್ಭಿಣಿಯರನ್ನು ಪೇಟೆ ಸಮೀಪದ ನೆಂಟರ ಮನೆಯಲ್ಲಿ ಹೆರಿಗೆಯಾಗುವ ತನಕ ಬಿಡಬೇಕಾದ ದುಸ್ಥಿತಿ.

ಯಳಿಜಿತ್ ಸಮೀಪದ ತೊಂಡ್ಲೆಯಿಂದ ಕಾಶೀಕೊಡ್ಲುವಿಗೆ ಸುಮಾರು 5ಕಿ.ಮಿ. ತನಕ ಕಲ್ಲು ಮಣ್ಣುಗಳಿಂದ ಕೂಡಿದ ರಸ್ತೆ ವಾಹನದಲ್ಲಿ ಹೋಗುವುದು ಬಿಡಿ, ನಡೆದಾಡಲೂ ಅಸಾಧ್ಯ. ಆರೋಗ್ಯಾಧಿಕಾರಿಗಳು, ಪಶು ವೈದ್ಯರ ಕಾಲಿಗೆ ಬಿದ್ದರೂ ಈ ಊರಿಗೆ ಬರಲು ಒಪ್ಪೋದಿಲ್ಲ.

ಇಷ್ಟೆಲ್ಲಾ ಸಮಸ್ಯೆಗಳು ಈ ಊರಿನಲ್ಲಿದ್ದರೂ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಕಣ್ಣೆತ್ತಿಯೂ ನೋಡುತ್ತಿಲ್ಲ. ಇದೆಲ್ಲದರಿಂದ ರೋಸಿ ಹೋಗಿರುವ ಹುಣಸೆಮಕ್ಕಿಯ ಜನ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ರಾಜಕಾರಣಿಗಳನ್ನು ಊರೊಳಗೆ ಬಿಡುವುದಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ನಿವಾಸಿ ಸುರೇಂದ್ರ.

ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಊರಿಗೆ ಸಿಗಬೇಕಾದ ಸವಲತ್ತು ಒದಗಿಸಬಲ್ಲರೇ ಕಾದು ನೋಡಬೇಕಿದೆ.

ವಿಶೇಷ ವರದಿ: ಜಯಶೇಖರ್ ಮಡಪ್ಪಾಡಿ , ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
Kshetra Samachara

Kshetra Samachara

14/08/2022 04:00 pm

Cinque Terre

12.84 K

Cinque Terre

1