ಸುಳ್ಯ: ಕೊಡಗು ಜಿಲ್ಲೆಯ ಮದೆನಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿಯುತ್ತಿರುವ ಪರಿಣಾಮ ಮಡಿಕೇರಿ-ಮಂಗಳೂರು ರಸ್ತೆ ಸಂಚಾರವನ್ನು ಇಂದು ರಾತ್ರಿ 9 ಗಂಟೆಯಿಂದ ನಾಳೆ ಬೆಳಗ್ಗೆ 6.30 ಗಂಟೆವರೆಗೂ ಎಲ್ಲಾ ವಾಹನ ಸಂಚಾರ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮದೆನಾಡು ಬಳಿ ಗುಡ್ಡ ಕುಸಿತದ ಆತಂಕವಿದ್ದು ವಾಹನ ಪ್ರಯಾಣಿಕರಿಗೆ ಅಪಾಯ ಸಾಧ್ಯತೆ ಇರುವ ಕಾರಣದಿಂದ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಗ್ರಾಮದ ಗುಡ್ಡ ಪ್ರದೇಶದಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡಿದ್ದು, ಮಣ್ಣು ಕುಸಿತದೊಂದಿಗೆ ಸಂಪರ್ಕ ಕಡಿತದ ಆತಂಕ ಎದುರಾಗಿದೆ.
ಕಳೆದ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಮಡಿಕೇರಿ ಸಮೀಪದ ಮದೆನಾಡು ಗ್ರಾಮದ ಕರ್ತೋಜಿ ಎಂಬಲ್ಲಿ, ರಸ್ತೆ ಪಕ್ಕದ ಗುಡ್ಡದಲ್ಲಿ ಭಾರೀ ಬಿರುಕು ಮೂಡಿದೆ. ಅಲ್ಪಸ್ವಲ್ಪ ಕುಸಿತವೂ ಸಂಭವಿಸಿದೆ. ಮಳೆಯ ಪ್ರಮಾಣ ಹೆಚ್ಚಿದಲ್ಲಿ ಯಾವುದೇ ಕ್ಷಣದಲ್ಲೂ ಮಣ್ಣು ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
ಮಹಾಮಳೆಯೊಂದಿಗೆ ಪ್ರಾಕೃತಿಕ ವಿಕೋಪಗಳು ಘಟಿಸಿದ 2018ನೇ ಸಾಲಿನಲ್ಲಿ ಈಗ ಬಿರುಕು ಬಿಟ್ಟಿರುವ ಬೆಟ್ಟ ಪ್ರದೇಶದಲ್ಲೆ ಭಾರೀ ಪ್ರಮಾಣದ ಭೂ ಕುಸಿತವುಂಟಾಗಿ, ರಾಷ್ಟ್ರೀಯ ಹೆದ್ದಾರಿ ಕುಸಿದು ಸಂಪರ್ಕ ಕಡಿತಗೊಂಡಿತ್ತು. ಇದೀಗ ಮತ್ತೆ ಇದೇ ಪ್ರದೇಶದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದೆ. ಶಾಸಕ ಕೆ.ಜಿ.ಬೋಪಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಹೆದ್ದಾರಿ ಬಳಿ ಮಣ್ಣು ಕುಸಿಯುವ ಸಾಧ್ಯತೆ ಇದ್ದು, ಈ ಸಂಬಂಧ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
Kshetra Samachara
09/08/2022 10:03 pm