ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಕಳೆದ ಕೆಲವು ದಿನಗಳಿಂದ ಪಬ್ಲಿಕ್ ನೆಕ್ಸ್ಟ್ ಹದಗೆಟ್ಟ ಹೊಂಡಾಗುಂಡಿ ರಸ್ತೆಗಳ ಸರಣಿ ಲೇಖನ ಪ್ರಕಟಿಸಿದೆ. ರಾಜ್ಯ , ರಾಷ್ಟ್ರೀಯ ಹೆದ್ದಾರಿಗಳ ಅವ್ಯವಸ್ಥೆ ಕುರಿತು ಬೆಳಕು ಚೆಲ್ಲಿದೆ. ಇವತ್ತು ಜಿಲ್ಲೆಯ ಪ್ರಮುಖ ಹೈವೇಯಲ್ಲಾಗುವ ಅಪಘಾತ ಮತ್ತು ಸಾವಿಗಳ ವಿವರ ನಿಮ್ಮ ಮುಂದಿಡುತ್ತಿದ್ದೇವೆ...
ಇದು ಮಂಗಳೂರಿನಿಂದ ಬೈಂದೂರುವರೆಗೆ ರಾಷ್ಟ್ರೀಯ ಹೆದ್ದಾರಿಯ ವ್ಯಥೆ. NH 66 ಎಂದರೆ ಜಿಲ್ಲೆಯ ಜನ ಬೆಚ್ಚಿ ಬೀಳುತ್ತಾರೆ. ನಿತ್ಯ ಈ ರಸ್ತೆಗೆ ನೆತ್ತರ ಅಭಿಷೇಕ ಬೇಕೇಬೇಕು. ಹೀಗಾಗಿ ಪ್ರತೀ ಸವಾರರೂ ಹೆದ್ದಾರಿ ಇಲಾಖೆ ಮತ್ತು ಸರಕಾರಕ್ಕೆ ಹಿಡಿಶಾಪ ಹಾಕಿಯೇ ಸಂಚರಿಸುತ್ತಾರೆ. ಈ ಹೈವೇ ಸಹಿತ ಜಿಲ್ಲೆಯ ರಸ್ತೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಬಲಿಯಾದವರ ಸಂಖ್ಯೆ ಬರೋಬ್ಬರಿ 1243 !ಅಂದರೆ ವರ್ಷಕ್ಕೆ ಸರಾಸರಿ 200ಕ್ಕೂ ಹೆಚ್ಚು ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ.
* 8 ಶಾಲಾ ಮಕ್ಕಳ ದುರ್ಮರಣ!: 2016 ರ ಜೂನ್ 21 ರಂದು ಸುರಿಯುವ ಮಳೆಯಲ್ಲಿ ಮೊವಾಡಿ ಜಂಕ್ಷನ್ ನಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಓಮ್ನಿಗೆ ಬಸ್ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ 8 ಮಕ್ಕಳು ಒಂದೇ ದಿನ ಅಸು ನೀಗಿದ್ದರು. ಇದು ಒಂದು ಪ್ರಕರಣ ಮಾತ್ರ. ಇಂತಹ ನೂರಾರು ಪ್ರಕರಣಗಳಿಂದ ಸಾವಿರಕ್ಕೂ ಮಿಕ್ಕಿ ಜನರು ಈ ಹೈವೇಗೆ ಬಲಿಯಾಗಿದ್ದಾರೆ.
2017 ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರು 231, ಗಂಭೀರ ಗಾಯಗೊಂಡವರು 902, ಸಣ್ಣ ಗಾಯ 538 ಒಟ್ಟು 1671
ಇನ್ನು 2018 ಮೃತಪಟ್ಟವರ ಸಂಖ್ಯೆ 228. ಗಂಭೀರ ಗಾಯಗೊಂಡವರು 649. ಸಣ್ಣ ಗಾಯ 794, ಒಟ್ಟು 1671.
2019 ರಲ್ಲಿ ಅಪಘಾತಗಳಿಗೆ 264 ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡವರು 1003, ಸಣ್ಣ ಗಾಯ 316 ಒಟ್ಟು 1583.
2020 ಮೃತಪಟ್ಟವರು 196 ಮಂದಿಯಾದರೆ ಗಂಭೀರ ಗಾಯಗೊಂಡವರು 760, ಸಣ್ಣ ಗಾಯ 350 ಒಟ್ಟು 1306.
2021 ಮೃತಪಟ್ಟವರ ಸಂಖ್ಯೆ 196. ಗಂಭೀರ ಗಾಯಗೊಂಡವರು 754 ಸಣ್ಣ ಗಾಯಗೊಂಡವರು 407 ಒಟ್ಟು 1357.
ಈ ವರ್ಷ ಏಳೇ ತಿಂಗಳಲ್ಲಿ 128 ಜನ ಮೃತಪಟ್ಟಿದ್ದರೆ ಗಂಭೀರ ಗಾಯಗೊಂಡವರು 483 ಸಣ್ಣ ಗಾಯ 399 ಒಟ್ಟು 1005.
ಹೀಗೆ ಮುಂದುವರೆಯುತ್ತದೆ ಅಂಕಿಅಂಶ. ಸದ್ಯ ಮಳೆಗೆ ರಾಷ್ಟ್ರೀಯ ಹೆದ್ದಾರಿ ತೀರಾ ಹದಗೆಟ್ಟಿದ್ದು, ಹೊಂಡ ತಪ್ಪಿಸಲು ಹೋಗಿ ಪ್ರಾಣದ ಜೊತೆಗೆ ವಾಹನಗಳೂ ಜಖಂಗೊಂಡ ಪ್ರಕರಣ ಅನೇಕ.
"ರಾಷ್ಟೀಯ ಹೆದ್ದಾರಿ ಹೊಂಡ ಮುಚ್ಚುವಂತೆ ಮತ್ತು ದುರಸ್ತಿ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. 15 ದಿನಗಳ ಮಳೆಯಿಂದ ಇದು ಸಾಧ್ಯವಾಗಿಲ್ಲ. ಈಗ ಮತ್ತೊಮ್ಮೆ ಸಭೆ ಕರೆದು ಸೂಚಿಸುತ್ತೇನೆ" ಎಂದು ಡಿ.ಸಿ.ಕೂರ್ಮಾ ರಾವ್ ಹೇಳಿದ್ದಾರೆ.
Kshetra Samachara
26/07/2022 09:09 pm