ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿಯ ನಾಗಬನದ ಬಳಿಯ ಉದ್ಯಾನವನ ಕಿಡಿಗೇಡಿಗಳ ಪಾಲಾಗುತ್ತಿದ್ದು ಸಂರಕ್ಷಿಸುವ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಿಲ್ಲಾ ಮಾದಿಗ ದಂಡೋರ ಸಮಿತಿ ಅಧ್ಯಕ್ಷ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಮಾಧ್ಯಮದ ಜೊತೆ ಮಾತನಾಡಿ ಉದ್ಯಾನವನದ ಗಿಡಗಳಿಗೆ ಸೂಕ್ತ ಬೀಗ ಅಳವಡಿಸದೆ ಇರುವುದರಿಂದ ಒಳಗಿನ ಸೊತ್ತುಗಳು ಕಿಡಿಗೇಡಿಗಳ ಪಾಲಾಗುತ್ತಿದ್ದು ರಾತ್ರಿಹೊತ್ತು ಕೆಲ ದುಷ್ಕರ್ಮಿಗಳು ಮದ್ಯ ಸೇವಿಸಿ ಸಮಾಜಘಾತುಕ ಕೆಲಸಗಳು ನಡೆಯುತ್ತಿದೆ. ಅಲ್ಲದೆ ಉದ್ಯಾನವನದ ಒಳಗಡೆ ಲಿಂಗಪ್ಪಯ್ಯಕಾಡು ಪರಿಸರಕ್ಕೆ ನೀರುಣಿಸುವ ನೀರಿನ ಟ್ಯಾಂಕ್ ಇದ್ದು ಅದರ ರಕ್ಷಣೆ ಮಾಡುವುದು ಅಗತ್ಯವಾಗಿದೆ.
ಈ ಬಗ್ಗೆ ಅನೇಕ ಬಾರಿ ನಗರ ಪಂಚಾಯತಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಕಳೆದ ಕೆಲವರ್ಷಗಳಿಂದ ಉದ್ಯಾನವನಕ್ಕೆ ಡಾ. ಬಾಬು ಜಗಜೀವನರಾಮ್ ನಾಮಫಲಕ ಅಳವಡಿಸಲು ಸಮಿತಿ ವತಿಯಿಂದ ಒತ್ತಾಯ ಮಾಡುತ್ತಿದ್ದರೂ ಇದುವರೆಗೂ ಕಾರ್ಯಗತಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಯೋಜನಾ ನಿರ್ದೇಶಕರು ಜಿಲ್ಲಾಧಿಕಾರಿಗಳ ಕಚೇರಿ ಮಂಗಳೂರು, ಸಹಾಯಕ ಆಯುಕ್ತರು ಮಂಗಳೂರು,ಮುಲ್ಕಿ ತಹಶಿಲ್ದಾರ್, ಮುಲ್ಕಿ ನ.ಪಂ.ಮುಖ್ಯಾಧಿಕಾರಿ ರವರಿಗೆ ಮನವಿ ಸಲ್ಲಿಸಿದ್ದು ಕೂಡಲೇ ಬೇಡಿಕೆ ಈಡೇರಿಸಬೇಕು ಹಾಗೂ ಉದ್ಯಾನವನವನ್ನು ರಕ್ಷಿಸಬೇಕು ಇಲ್ಲದಿದ್ದರೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಸಮಿತಿ ಅಧ್ಯಕ್ಷ ನಾಗೇಶ್ ಕೆಎಸ್ ರಾವ್ ನಗರ ಮಾಧ್ಯಮಕ್ಕೆ ತಿಳಿಸಿದ್ದಾರೆ.
Kshetra Samachara
17/06/2022 09:25 pm