ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಆರಾಮದಾಯಕ, ಸುಖಕರ, ನಿಶ್ಚಿಂತೆಯಿಂದ ಪ್ರಯಾಣ ಮಾಡಬಹುದೆಂದು ಭಾವಿಸಿದರೆ ಅದು ತಪ್ಪು. ಕೃಷ್ಣನ ನಾಡಿಗೆ ಪ್ರವೇಶಿಸಿದೊಡನೆ ನಿಮಗೆ ಅಪಾಯಕಾರಿ ಜಂಕ್ಷನ್‌ಗಳು ಎದುರಾಗುತ್ತವೆ. ಅವುಗಳಲ್ಲಿ ಬಲಾಯಿಪಾದೆ ಜಂಕ್ಷನ್ ಪ್ರಮುಖವಾದದ್ದು.
ಉಡುಪಿಯ ಉದ್ಯಾವ ಸಮೀಪದ ಬಲಾಯಿಪಾದೆ ಜಂಕ್ಷನ್‌ನಲ್ಲಿ ಅಪಘಾತಗಳು ಮಾಮೂಲು ಎಂಬಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಮಾಡುವಾಗ ಇಲ್ಲಿ ಸರ್ವಿಸ್ ರಸ್ತೆ ಮಾಡದೇ ಇರುವುದು ಮತ್ತು ಅವೈಜ್ಞಾನಿಕ ಯೋಜನೆಯೇ ಇದಕ್ಕೆ ಪ್ರಮುಖ ಕಾರಣ. ಈ ಜಂಕ್ಷನ್‌ನಲ್ಲಿ ಮುಖ್ಯವಾಗಿ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಇದ್ದರೆ, ಇತ್ತ ಕಡೆ ಉದ್ಯಾವರ, ಇನ್ನೊಂದು ಕಡೆ ಉಡುಪಿ ಹೋಗುವ ರಸ್ತೆ ಕೂಡಿಕೊಳ್ಳುತ್ತವೆ. ಇಲ್ಲಿ ವಾಹನ ದಟ್ಟಣೆಯೂ ಅಧಿಕ. ವಾಹನ ಸವಾರರು ಅನಿವಾರ್ಯ ಕಾರಣಗಳಿಂದ ಇಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುತ್ತಾರೆ. ಇದರಿಂದಾಗಿ ನಿತ್ಯ ಈ ಜಂಕ್ಷನ್ ಅವ್ಯವಸ್ಥೆಯಿಂದ ಕೂಡಿದ್ದು ಅಪಘಾತ ಸಾಮಾನ್ಯವಾಗಿ ಬಿಟ್ಡಿದೆ.
ಇಲ್ಲಿ ಅನೇಕ ಮಂದಿ ಜೀವ ಕಳೆದುಕೊಂಡರೂ ಸರಿಯಾದ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲ. ಇಲ್ಲಿ ಫ್ಲೈ ಓವರ್‌ಗಾಗಿ ನಡೆದ ಪ್ರತಿಭಟನೆಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸೊಪ್ಪು ಹಾಕಲಿಲ್ಲ. ಕನಿಷ್ಠ ಪಾದಚಾರಿಗಳು ಸುರಕ್ಷಿತ ವಾಗಿ ಅತ್ತಿಂದಿತ್ತ ಸಂಚರಿಸುವುದಕ್ಕೂ ವ್ಯವಸ್ಥೆ ಕಲ್ಪಿಸಲಿಲ್ಲ. ಕೆಲವೊಮ್ಮೆ ಪೊಲೀಸ್ ಸಿಬಂದಿ ಇಲ್ಲಿ ಕಾರ್ಯ ನಿರ್ವಹಿಸಿದರೂ ಬಹುತೇಕ ಹೊತ್ತು ಇಡೀ ಜಂಕ್ಷನ್ ಅನಾಥ. ಇಡೀ ದಿನ ಎಲ್ಲ ಕಡೆಯಿಂದಲೂ ವಾಹನ ಸವಾರರು ನುಗ್ಗುತ್ತಲೇ ಇರುತ್ತಾರೆ.
ಉದ್ಯಾವರ ಬಲಾಯಿಪಾದೆಯಿಂದ ಕಲ್ಯಾಣಪುರ ಸಂತೆಕಟ್ಟೆ ಸೇತುವೆಯ ವರೆಗೆ ಕಳೆದ 3 ವರ್ಷಗಳಲ್ಲಿ ಅಪಘಾತದಿಂದ ಸತ್ತವರ ಸಂಖ್ಯೆ ನೂರಾರು. ಇಲ್ಲೊಂದು ಸರ್ವಿಸ್ ರಸ್ತೆಯ ಅಗತ್ಯ ಖಂಡಿತ ಇದೆ. ಕೇವಲ ರಾಷ್ಟ್ರೀಯ ಹೆದ್ದಾರಿಗೆ ಕೇವಲ ಬ್ಯಾರಿಕೇಡ್ ಹಾಕಿ ಸಂಚಾರ ಸುಗಮಗೊಳಿಸುವ "ಕೃತಕ" ವ್ಯವಸ್ಥೆಯಿಂದ ಅಧಿಕಾರಿಗಳು ಹೊರಬರಬೇಕಿದೆ.
-ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ
Kshetra Samachara
27/05/2022 07:37 pm